ಬೆಂಗಳೂರು: ಅಜ್ಜಿ ಚೆನ್ನಮ್ಮರನ್ನು ಕಳೆದುಕೊಂಡು ದುಃಖದಲ್ಲಿ ಇರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಶಾಕ್ ಎದುರಾಗಿದೆ. ಅತ್ಯಾಚಾರ ಕೇಸ್ನಲ್ಲಿ ಅಪರಾಧಿಯಾಗಿ, ಜೀವಾವಧಿ ಶಿಕ್ಷೆ ಅನುಭಸುತ್ತಿರುವ ಪ್ರಜ್ವಲ್ ರೇವಣ್ಣ, ಸದ್ಯ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಅವನನ್ನು ಪೆರೋಲ್ಮೇಲೆ ಆದರೂ ಚೆನ್ನಮ್ಮನ ತಿಥಿಗೆ ಕರೆತರಬೇಕು ಅಂತ ದೇವೇಗೌಡ ಕುಟುಂಬಸ್ಥರು ತೀವ್ರ ಪ್ರಯತ್ನ ನಡೆಸಿದ್ದರು. ಆದರೆ ಆ ಪ್ರಯತ್ನಕ್ಕೆ ಕಾರಾಗೃಹ ಇಲಾಖೆ ತಣ್ಣೀರು ಎರಚಿದೆ.

ಅಜ್ಜಿ ಅಂತ್ಯಕ್ರಿಯೆಗೆ ಬರಲೂ ಸಿಗಲಿಲ್ಲ ಅವಕಾಶ!
ಪ್ರಜ್ವಲ್ ರೇವಣ್ಣ ಜೀವಾವಧಿ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಅಜ್ಜಿ ಚೆನ್ನಮ್ಮ ನಿಧನರಾದಾಗ ಅವರ ಅಂತ್ಯಸಂಸ್ಕಾರಕ್ಕಾದರೂ ಆತನನ್ನು ಕರೆತರಬೇಕು ಅಂತ ಕುಟುಂಬಸ್ಥರು ಪ್ರಯತ್ನಿಸಿದ್ದರು. ಆದರೆ ಪೆರೋಲ್ಗೆ ಪ್ರಜ್ವಲ್ ಅರ್ಜಿ ಸಲ್ಲಿಸಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಚೆನ್ಮಮ್ಮನ ಅಂತ್ಯಕ್ರಿಯೆಗೆ ಮೊಮ್ಮಗ ಪ್ರಜ್ವಲ್ ರೇವಣ್ಣ ಬಂದಿರಲಿಲ್ಲ.
ಪೆರೋಲ್ ಮೇಲೆ ಕರೆತರಲು ಕುಟುಂಬಸ್ಥರ ಪ್ರಯತ್ನ
ಇನ್ನು ಚೆನ್ನಮ್ಮ ದೇವೇಗೌಡ ಅವರ ತಿಥಿ ಕಾರ್ಯಗಳು ಅದ್ದೂರಿಯಾಗಿ ನಡೆಸಲು ಗೌಡರ ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ. ಜುಲೈ 30ರಂದು ಚೆನ್ನಮ್ಮ ತಿಥಿ ಕಾರ್ಯ ನಡೆಯಲಿದೆ. ಈ ತಿಥಿ ಕಾರ್ಯಕ್ಕಾದರೂ ಪ್ರಜ್ವಲ್ ರೇವಣ್ಣನನ್ನು ಹೊರಗೆ ಕರೆತರಬೇಕು ಅಂತ ರೇವಣ್ಣ ಸೇರಿದಂತೆ ದೇವೇಗೌಡರ ಕುಟುಂಬಸ್ಥರು ಪ್ರಯತ್ನಿಸಿದ್ದರು. ಪೆರೋಲ್ ಮೇಲೆ ಪ್ರಜ್ವಲ್ನನ್ನು ಕರೆ ತರಲು ಎಲ್ಲಾ ಪ್ರಯತ್ನ ನಡೆಸಲಾಗಿತ್ತು.
ಪ್ರಜ್ವಲ್ ಆಸೆಗೆ ತಣ್ಣೀರು ಎರಚಿದ ಕಾರಾಗೃಹ ಇಲಾಖೆ
ಆದರೆ ಪ್ರಜ್ವಲ್ ರೇವಣ್ಣ ಪೆರೋಲ್ ಆಸೆಗೆ ಕಾರಾಗೃಹ ಇಲಾಖೆ ತಣ್ಣೀರು ಎರಚಿದೆ. ಪ್ರಜ್ವಲ್ ರೇವಣ್ಣಗೆ ಪೆರೋಲ್ ನೀಡಲು ಸಾಧ್ಯವಿಲ್ಲ ಅಂತ ಕಾರಾಗೃಹ ಇಲಾಖೆ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಅತ್ಯಾಚಾರದ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿ ಶಿಕ್ಷೆಗೆ ಒಳಗಾಗಿರುವ ಅಪರಾಧಿಗೆ ಪೆರೋಲ್ ನೀಡಲು ಸಾಧ್ಯವಿಲ್ಲ ಅಂತ ಕಾರಾಗೃಹ ಇಲಾಖೆ ತಿಳಿಸಿದ್ದು, ಇದು ನಮ್ಮ ವ್ಯಾಪ್ತಿಗೆ ಬರೋದಿಲ್ಲ ಅಂತ ಸ್ಪಷ್ಟಪಸಿದೆ ಎನ್ನಲಾಗಿದೆ.
ಪೆರೋಲ್ಗಾಗಿ ಕೋರ್ಟ್ ಮೆಟ್ಟಿಲೇರಲು ನಿರ್ಧಾರ
ಇನ್ನು ಕಾರಾಗೃಹ ಇಲಾಖೆ ಪೆರೋಲ್ಗೆ ನಿರಾಕರಿಸಿದ ಬೆನ್ನಲ್ಲೇ ಕೋರ್ಟ್ ಮೆಟ್ಟಿಲೇರಲು ಪ್ರಜ್ವಲ್ ರೇವಣ್ಣ ಕುಟುಂಬಸ್ಥರು ಮುಂದಾಗಿದ್ದಾರೆ ಎನ್ನಲಾಗಿದೆ. ಪ್ರಜ್ವಲ್ ಅಜ್ಜಿ ಅಂದರೆ ಚೆನ್ನಮ್ಮ ದೇವೇಗೌಡರ ತಿಥಿ ಕಾರ್ಯಕ್ಕಾಗಿ 15 ದಿನಗಳ ಕಾಲ ಪೆರೋಲ್ ನೀಡುವಂತೆ ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಳ ಸಂದರ್ಶನಕ್ಕೆ ಪ್ರಜ್ವಲ್ ರೇವಣ್ಣಗೆ ಅವಕಾಶ
ಇನ್ನು ಇತ್ತೀಚಿಗಷ್ಟೇ ಜನಪ್ರತಿನಿಧಿಗಳ ಕೋರ್ಟ್ ಪ್ರಜ್ವಲ್ ರೇವಣ್ಣಗೆ ಗುಡ್ ನ್ಯೂಸ್ ಕೊಟ್ಟಿತ್ತು. ಜೈಲಿನ ಒಳಗೆ ತಮ್ಮ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರ ಒಳ ಸಂದರ್ಶನಕ್ಕೆ ಅವಕಾಶ ಕೋರಿ ಅಪರಾಧಿ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಪರಪ್ಪನ ಅಗ್ರಹಾರ ಜೈಲು ಮುಖ್ಯ ಅಧೀಕ್ಷಕರು ನಿಯಮಾನುಸಾರ ಅಪರಾಧಿ ಭೇಟಿಗೆ ಅವಕಾಶ ನೀಡಲು ಸೂಚನೆ ನೀಡಿದೆ. ಭೇಟಿ ವೇಳೆ ಕಾರಾಗೃಹ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ ನೀಡಿತ್ತು.



