ನವದೆಹಲಿ, ಜು. 24: ಮೋದಿ ಸರ್ಕಾರ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸಿದ್ದು, ದೇಶದ ವಿದ್ಯಾರ್ಥಿಗಳು ಈ ಸರ್ಕಾರದ ನಿಜವಾದ ಮುಖವನ್ನು ಬಯಲಿಗೆಳೆದಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿಕಾರಿದ್ದಾರೆ.

“ಶಿಕ್ಷಣ ಕ್ಷೇತ್ರದಲ್ಲಿ ಹೊಣೆಗಾರಿಕೆ ಮತ್ತು ಸುಧಾರಣೆಗಳನ್ನು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಬದಲು, ಮೋದಿ ಸರ್ಕಾರ ಹೇಡಿತನ ಮತ್ತು ಅಮಾನವೀಯ ಕ್ರೌರ್ಯ ಪ್ರದರ್ಶಿಸಿದೆ. ವಿದ್ಯಾರ್ಥಿಗಳನ್ನು ದೇಶದ ಭವಿಷ್ಯದ ವಾರಸುದಾರರು ಎಂದು ಕಾಣಬೇಕಾದ ಸರ್ಕಾರ, ಅವರನ್ನು ರಾಷ್ಟ್ರದ ಶತ್ರುಗಳಂತೆ ನಡೆಸಿಕೊಳ್ಳುತ್ತಿದೆ. ವಿದ್ಯಾರ್ಥಿಗಳ ಸಮಸ್ಯೆಗಳ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ವಿದ್ಯಾರ್ಥಿಗಳೊಂದಿಗೆ ನಿಲ್ಲುವುದು ಮತ್ತು ಅವರ ಭವಿಷ್ಯವನ್ನು ರಕ್ಷಿಸುವುದು ನೈತಿಕ, ರಾಜಕೀಯ ಹಾಗೂ ಸಾಂವಿಧಾನಿಕ ಕರ್ತವ್ಯ. ಇಂದಿನ ನಿರಾಶಾದಾಯಕ ಶಿಕ್ಷಣ ವ್ಯವಸ್ಥೆ ಹಾಗೂ ಹೊಣೆಗಾರಿಕೆ ವಹಿಸಲು ಅಥವಾ ರಚನಾತ್ಮಕವಾಗಿ ಸ್ಪಂದಿಸಲು ಮೋದಿ ಸರ್ಕಾರ ತೋರಿಸುತ್ತಿರುವ ಅಹಂಕಾರ ಮತ್ತು ನಿರಾಸಕ್ತಿ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಕಾರಣವಾಗಿದೆ. ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಕೇಂದ್ರ ಗೃಹ ಸಚಿವರ ನೇರ ನಿಯಂತ್ರಣದಲ್ಲಿರುವ ಪೊಲೀಸ್ ಸಿಬ್ಬಂದಿ ನಡೆಸಿರುವ ದೌರ್ಜನ್ಯ ಈ ಸರ್ಕಾರಕ್ಕೆ ಹೊಸದೇನಲ್ಲ” ಎಂದಿದ್ದಾರೆ. “2020ರಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ-ರಾಷ್ಟ್ರೀಯ ನಾಗರಿಕರ ನೋಂದಣಿ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಸಶಸ್ತ್ರ ಪೊಲೀಸರು ಮತ್ತು ಅರೆಸೇನಾ ಪಡೆಗಳು ವಿಶ್ವವಿದ್ಯಾಲಯ ಕ್ಯಾಂಪಸ್ಗಳಿಗೆ ನುಗ್ಗಿ ನಡೆಸಿದ ದಾಳಿಯನ್ನು ನಾವು ಇನ್ನೂ ಮರೆತಿಲ್ಲ. ಭಾರತದ ಮಹಿಳಾ ಕುಸ್ತಿಪಟುಗಳ ವಿರುದ್ಧ ನಡೆದ ಅತಿರೇಕಗಳೂ ನಮ್ಮ ನೆನಪಿನಿಂದ ಅಳಿಸಿಹಾಕಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.
“ಮೋದಿ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹದಗೆಡಿಸಿರುವುದಷ್ಟೇ ಅಲ್ಲ, ಸಂಪೂರ್ಣ ದಂಡಮುಕ್ತತೆ, ಆತ್ಮಭ್ರಮೆ ಮತ್ತು ಸಂವೇದನಾಶೂನ್ಯತೆಯಿಂದ ವರ್ತಿಸುವುದನ್ನು ಅಭ್ಯಾಸವನ್ನಾಗಿಸಿಕೊಂಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯ ಕುಸಿತದ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆಗಳು ಇತ್ತೀಚಿನ ವಾರಗಳಲ್ಲಿ ತೀವ್ರಗೊಂಡಿವೆ” ಎಂದು ಹೇಳಿದ್ದಾರೆ.”ವಿದ್ಯಾರ್ಥಿಗಳ ಬೇಡಿಕೆಗಳು ಸರಳವಾಗಿವೆ. ಕೇಂದ್ರ ಸರ್ಕಾರದಿಂದ ಹೊಣೆಗಾರಿಕೆ ಮತ್ತು ಶಿಕ್ಷಣ ಸುಧಾರಣೆ. ಆದರೆ ಮೋದಿ ಸರ್ಕಾರ ಅವರ ಧೈರ್ಯಕ್ಕೆ ಪ್ರತಿಯಾಗಿ ಹೇಡಿತನ ಮತ್ತು ಅಮಾನವೀಯ ಕ್ರೌರ್ಯ ತೋರಿದೆ. ಅವರನ್ನು ದೇಶದ ಭವಿಷ್ಯದ ವಾರಸುದಾರರಂತೆ ಅಲ್ಲ, ರಾಷ್ಟ್ರದ ಶತ್ರುಗಳಂತೆ ನಡೆಸಿಕೊಂಡಿದೆ” ಎಂದು ಆರೋಪಿಸಿದ್ದಾರೆ.



