ಮೈಸೂರು,ಜು. 11: ಮೈಸೂರು ದಸರಾದಲ್ಲಿ ಕಂಬಳ ನಡೆಸುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರು ದಸರಾದ ಪಾವಿತ್ರ್ಯತೆ, ವೈಶಿಷ್ಟ್ಯವನ್ನು ಉಳಿಸಿಕೊಂಡು ಹೋಗಬೇಕು. ದಸರಾ ವೈಭವದ ಪಾವಿತ್ರ್ಯತೆ ಹಾಳು ಮಾಡದಿರಿ ಎಂದು ಮನವಿ ಮಾಡಿದರು. ಮೈಸೂರಿನ ದಸರಾ ಅದರದೇ ಆದ ವೈಶಿಷ್ಟ್ಯತೆ ಮತ್ತು ಪರಂಪರೆಯನ್ನು ಹೊಂದಿದೆ. ಯಾವುದೇ ಸರಕಾರ ಬಂದರೂ ಆ ಪರಂಪರೆ ಮತ್ತು ವೈಶಿಷ್ಟ್ಯವನ್ನು ಉಳಿಸಿಕೊಂಡು ಹೋಗಬೇಕಾಗುತ್ತದೆ ಎಂದು ನುಡಿದರು. ಈಗಾಗಲೇ ಸಂಸದರಾದ ಯದುವೀರ ಒಡೆಯರ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದರು.
ಮೈಸೂರು ದಸರಾವನ್ನು ಗುಲ್ಬರ್ಗದಲ್ಲಿ ಮಾಡಲು ಸಾಧ್ಯವಿಲ್ಲ; ಬಿಜೆಪಿ ಸರಕಾರ ಇದ್ದಾಗ ಯಡಿಯೂರಪ್ಪ ಅವರು ಕಂಬಳಕ್ಕೂ ಅನುದಾನ ಕೊಟ್ಟಿದ್ದರು ಎಂದ ಅವರು, ಕಂಬಳ ದಕ್ಷಿಣ ಕನ್ನಡದ ಅವಿಭಾಜ್ಯ ಅಂಗ. ಅಲ್ಲಿನ ಸಂಸ್ಕಂತಿಯನ್ನು ಬಿಂಬಿಸುತ್ತದೆ ಎಂದು ತಿಳಿಸಿದರು. ಅಲ್ಲಿ ಅದ್ಧೂರಿಯಾಗಿ ಹಾಗೂ ಚೆನ್ನಾಗಿ ಮಾಡಲಿ ಎಂದು ತಿಳಿಸಿದರು.ಮುಖ್ಯಮಂತ್ರಿಗಳು ಚರ್ಚೆ ಮಾಡದೇ ತೀರ್ಮಾನ ಮಾಡಿದ್ದು ಸರಿಯಲ್ಲ; ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಭಂಡತನ ಬದಿಗಿಟ್ಟು ರಾಜ್ಯದ ಸಂಸ್ಕಂತಿಯನ್ನು ಉಳಿಸಿಕೊಂಡು ಹೋಗಲಿ ಎಂದು ಒತ್ತಾಯಿಸಿದರು.



