ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ತನ್ನ 146 ವರ್ಷಗಳ ಸುದೀರ್ಘ ಇತಿಹಾಸದಲ್ಲಿಯೇ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. ಕಾಲ ಬದಲಾದಂತೆ ಭಾಷಾ ಕಲಿಕೆಯೂ ಆಧುನಿಕಗೊಳ್ಳಬೇಕು ಎಂಬುದನ್ನು ಮನಗಂಡು, ದೇಶದ ಅತ್ಯಂತ ಹಿರಿಯ ಕನ್ನಡ ವಿಭಾಗವು ಪ್ರಥಮ ಬಾರಿಗೆ ವಿನೂತನ ‘ಕನ್ನಡ ಎಂ.ಎ. ಪ್ರೊಫೆಷನಲ್ ಕೋರ್ಸ್ ಅನ್ನು ಪರಿಚಯಿಸಿದೆ.
ಈ ವಿಶೇಷ ಸ್ನಾತಕೋತ್ತರ ಪದವಿಯು ಸಾಂಪ್ರದಾಯಿಕ ಕನ್ನಡ ಸಾಹಿತ್ಯಕ್ಕಷ್ಟೇ ಸೀಮಿತವಾಗಿರದೆ, ಇಂದಿನ ಡಿಜಿಟಲ್ ಯುಗದ ಮಾರುಕಟ್ಟೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ವಿಶಿಷ್ಟ ಪಠ್ಯಕ್ರಮವನ್ನು ಹೊಂದಿದೆ.
ಕೋರ್ಸ್ನ ಪ್ರಮುಖ ಆಕರ್ಷಣೆಗಳು ಮತ್ತು ವೈಶಿಷ್ಟ್ಯಗಳು
ಪ್ರತಿ ಸೆಮಿಸ್ಟರ್ನಲ್ಲೂ ವಿದ್ಯಾರ್ಥಿಗಳಿಗೆ ಆಧುನಿಕ ಉದ್ಯೋಗಲೋಕಕ್ಕೆ ಪೂರಕವಾದ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ.
1. ವೃತ್ತಿಪರ ವಿನೂತನ ಡಿಜಿಟಲ್ ಕನ್ನಡ ಪತ್ರಿಕೆಗಳು: ಇದರಲ್ಲಿ ಭಾಷೆಯ ಹೊಸ ಸಾಫ್ಟ್ವೇರ್ಗಳು, ಆಧುನಿಕ ಡಿಜಿಟಲ್ ಸಂವಹನ ತಂತ್ರಜ್ಞಾನ, ನವ ಪತ್ರಿಕೋದ್ಯಮ, ಸೃಜನಶೀಲ ಜಾಹೀರಾತು ನಿರ್ಮಾಣ ಹಾಗೂ ಅತ್ಯಂತ ಪ್ರಮುಖವಾಗಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಪ್ರಾಂಪ್ಟ್ ಇಂಜಿನಿಯರಿಂಗ್ ಕುರಿತು ತರಬೇತಿ ನೀಡಲಾಗುತ್ತದೆ. ಇದರೊಂದಿಗೆ ಸಾಂಸ್ಕೃತಿಕ ಪ್ರವಾಸೋದ್ಯಮ ಮತ್ತು ಕಂಟೆಂಟ್ ಬರವಣಿಗೆಯನ್ನೂ ಅಳವಡಿಸಲಾಗಿದೆ.
2. ಆಧುನಿಕ ವೃತ್ತಿಪರ ಕನ್ನಡ ಬರವಣಿಗೆ: ಅನುವಾದ ಉದ್ಯಮ, ವಿಜ್ಞಾನ ಮತ್ತು ವಾಣಿಜ್ಯ ಬರವಣಿಗೆ, ಕಥೆ-ಕವನಗಳ ರಂಗರೂಪ ಹಾಗೂ ಚಿತ್ರಕಥೆ ಬರವಣಿಗೆಯನ್ನು ಇಲ್ಲಿ ಕಲಿಸಲಾಗುತ್ತದೆ. 3. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ: ಐ.ಎ.ಎಸ್ ಪರೀಕ್ಷೆಯ ಕನ್ನಡ ಸಿಲಬಸ್ ಮತ್ತು ಪತ್ರಿಕೆಗಳ ಸಂಪೂರ್ಣ ಅಳವಡಿಕೆ ಹಾಗೂ ಯು.ಜಿ.ಸಿ ನೆಟ್ ಪರೀಕ್ಷೆಯ ಮುಖ್ಯ ಭಾಗಗಳನ್ನು ಪಠ್ಯಕ್ರಮದಲ್ಲಿ ಸೇರಿಸಲಾಗಿದೆ.
ಉದ್ಯೋಗಾವಕಾಶದ ಕ್ಷೇತ್ರಗಳು
ಈ ಕೋರ್ಸ್ ಮುಗಿಸುವ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಕ ವೃತ್ತಿಯಷ್ಟೇ ಅಲ್ಲದೆ, ಕಿರುತೆರೆ, ಹಿರಿತೆರೆ ಹಾಗೂ ಒಟಿಟಿ ಮನೋರಂಜನಾ ಉದ್ಯಮ, ಮಾಧ್ಯಮ, ಡಿಜಿಟಲ್ ಸಂವಹನ ನಿರ್ವಹಣೆ, ಕಂಟೆಂಟ್ ರೈಟಿಂಗ್ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಅಪಾರ ಉದ್ಯೋಗಾವಕಾಶಗಳು ಸಿಗಲಿವೆ. ಈ ತಾಂತ್ರಿಕ ಕಲಿಕೆಗಾಗಿ ಬೆಂಗಳೂರು ಮತ್ತು ಮೈಸೂರಿನ ಡಿಜಿಟಲ್ ಕನ್ನಡ ತಜ್ಞರು ಹಾಗೂ ಚಲನಚಿತ್ರ-ನವಮಾಧ್ಯಮ ಲೋಕದ ಪರಿಣತರ ಸಹಯೋಗವನ್ನು ಪಡೆಯಲಾಗಿದೆ.
ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ವಿವರ
ಯಾವುದೇ ಪದವಿಯಲ್ಲಿ ಕನಿಷ್ಠ ಶೇಕಡಾ 55 ರಷ್ಟು ಅಂಕಗಳನ್ನು ಗಳಿಸಿರುವ ಹಾಗೂ ಕನ್ನಡ ಭಾಷೆಯಲ್ಲಿ ಓದುವ, ಬರೆಯುವ ಮತ್ತು ಮಾತನಾಡುವ ಸಮರ್ಥ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಈ ಕೋರ್ಸ್ಗೆ ಅರ್ಜಿ ಸಲ್ಲಿಸಬಹುದು.
ಗೌರವಾನ್ವಿತ ವೈಸ್ ಚಾನ್ಸಲರ್ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್. ಜೆ ಅವರ ನೇತೃತ್ವದಲ್ಲಿ ಈ ಕೋರ್ಸ್ ನಡೆಯುತ್ತಿದ್ದು, ಆಸಕ್ತರು ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣಗಳಾದ [https://staloysius.edu.in/apply-online](https://staloysius.edu.in/apply-online) ಅಥವಾ [https://pgadmissions.staloysius.edu.in/register](https://pgadmissions.staloysius.edu.in/register) ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವಿಭಾಗ ಮುಖ್ಯಸ್ಥರಾದ ಡಾ. ದಿನೇಶ್ ನಾಯಕ್ (9449255056) ಅಥವಾ ಡಾ. ಮಹಾಲಿಂಗ ಭಟ್ ಕೆ (9449615469) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





