ಏಪ್ರಿಲ್ನಲ್ಲಿ ಘೋಷಣೆಯಾಗಿದ್ದ ತಾತ್ಕಾಲಿಕ ಕದನ ವಿರಾಮದ 56 ದಿನಗಳ ಬಳಿಕ, ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೊಮ್ಮೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಬುಧವಾರ (ಜೂನ್ 3) ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ಸೇನೆ ಭಾರಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದೆ.
ಕುವೈತ್ ಏರ್ಪೋರ್ಟ್ನಲ್ಲಿ ತಲ್ಲಣ ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 (T1) ಕಟ್ಟಡವನ್ನು ಗುರಿಯಾಗಿಸಿಕೊಂಡು ಇರಾನ್ ಈ ದಾಳಿ ನಡೆಸಿದೆ. ರಾಯಿಟರ್ಸ್ ಮತ್ತು ಕುವೈತ್ನ ಸರ್ಕಾರಿ ಸುದ್ದಿ ಸಂಸ್ಥೆಗಳ ವರದಿ ಪ್ರಕಾರ, ದಾಳಿಯಿಂದಾಗಿ ಕಟ್ಟಡಕ್ಕೆ ಭಾರಿ ಹಾನಿಯಾಗಿದ್ದು, ಹಲವು ಜನರಿಗೆ ಗಾಯಗಳಾಗಿವೆ. ಕುವೈತ್ ರಕ್ಷಣಾ ಸಚಿವಾಲಯದ ವಕ್ತಾರ ಬ್ರಿಗೇಡಿಯರ್ ಜನರಲ್ ಸೌದ್ ಅಬ್ದುಲಜೀಜ್ ಅಲ್-ಒತೈಬಿ ಅವರು ಈ ಘಟನೆಯನ್ನು “ಇರಾನ್ನ ಕ್ರಿಮಿನಲ್ ಆಕ್ರಮಣ” ಎಂದು ಖಂಡಿಸಿದ್ದಾರೆ.
ಸದ್ಯ ಗಾಯಾಳುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು, ಕುವೈತ್ ವಿಮಾನ ನಿಲ್ದಾಣದಿಂದ ಎಲ್ಲಾ ವಾಣಿಜ್ಯ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಕುವೈತ್ಗೆ ಬರಬೇಕಿದ್ದ ವಿಮಾನಗಳನ್ನು ಬೇರೆ ನಿಲ್ದಾಣಗಳಿಗೆ ಕಳುಹಿಸಲಾಗಿದೆ.
ಅಮೆರಿಕದ ಪ್ರತಿದಾಳಿ
ಇರಾನ್ನ ಈ ಹೆಜ್ಜೆಗೆ ಅಮೆರಿಕ ಕೂಡ ದಿಟ್ಟ ತಿರುಗೇಟು ನೀಡಿದೆ. ಕುವೈತ್ ಮತ್ತು ಬಹ್ರೇನ್ ಕಡೆಗೆ ಬರುತ್ತಿದ್ದ ಇರಾನ್ನ ಹಲವು ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ಅಮೆರಿಕ ಹಾಗೂ ಬಹ್ರೇನ್ ಸೇನಾಪಡೆಗಳು ಆಕಾಶದಲ್ಲೇ ಹೊಡೆದುರುಳಿಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ. ಇರಾನ್ನ ಆಕ್ರಮಣಕ್ಕೆ ಪ್ರತಿಯಾಗಿ, ಅಮೆರಿಕ ಸೇನೆಯು ಇರಾನ್ನ ‘ಖೇಶ್ಮ್ ದ್ವೀಪ’ದಲ್ಲಿರುವ ಸೇನಾ ನಿಯಂತ್ರಣ ಕೇಂದ್ರದ ಮೇಲೆ ಪ್ರತಿದಾಳಿ ನಡೆಸಿದೆ.
ಮಧ್ಯಪ್ರಾಚ್ಯದಲ್ಲಿ ಮತ್ತೆ ಆತಂಕ
ಕಳೆದ ಫೆಬ್ರವರಿಯಲ್ಲಿ ಶುರುವಾಗಿದ್ದ ಈ ಯುದ್ಧ, ಏಪ್ರಿಲ್ 8 ರಂದು ಕದನ ವಿರಾಮದೊಂದಿಗೆ ಕೊಂಚ ತಣ್ಣಗಾಗಿತ್ತು. ಆದರೆ, ಹಾರ್ಮುಜ್ ಜಲಸಂಧಿಯ ದಿಗ್ಬಂಧನ ಮತ್ತು ಲೆಬನಾನ್ನಲ್ಲಿ ಇಸ್ರೇಲ್ ಕಾರ್ಯಾಚರಣೆಗಳ ವಿಚಾರದಲ್ಲಿ ಶಾಂತಿ ಮಾತುಕತೆಗಳು ಮುರಿದುಬಿದ್ದಿವೆ. ಅಮೆರಿಕವು ಇರಾನ್ಗೆ ಹೋಗುತ್ತಿದ್ದ ತೈಲ ಹಡಗೊಂದರ ಮೇಲೆ ಮಂಗಳವಾರ ಕ್ಷಿಪಣಿ ದಾಳಿ ನಡೆಸಿದ ನಂತರ, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈಗ ಇರಾನ್ ಮತ್ತು ಅಮೆರಿಕ ಮತ್ತೆ ಪರಸ್ಪರ ಕ್ಷಿಪಣಿ ದಾಳಿಗಳನ್ನು ಆರಂಭಿಸಿರುವುದರಿಂದ ಇಡೀ ಮಧ್ಯಪ್ರಾಚ್ಯ ವಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಯುದ್ಧದ ಈ ಹೊಸ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆ ಹಾಗೂ ಆರ್ಥಿಕತೆಯ ಮೇಲೆ ಮತ್ತಷ್ಟು ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ





