ವೇಣೂರು: ಇಲ್ಲಿಯ ಬಜಿರೆ ಸರಕಾರಿ ಪಿಯಂಶ್ರೀ (PM Schools for Rising India) ಶಾಲೆಯಲ್ಲಿ (ಇಂದು ಜೂ. 1) ಅದ್ದೂರಿಯಾಗಿ ಶಾಲಾ ಪ್ರಾರಂಭೋತ್ಸವ ನಡೆಯಿತು. ಬಿಸಿಲ ಧಗೆಯ ಮಧ್ಯೆಯೇ ಪುಟಾಣಿ ವಿದ್ಯಾರ್ಥಿಗಳು ಶಾಲೆಗಳತ್ತ ಅತೀ ಸಂಭ್ರಮದಿಂದ ಹೆಜ್ಜೆ ಹಾಕಿದರು.





ಪಥಸಂಚಲನ ಮೆರವಣಿಗೆಯಲ್ಲಿ ಸಾಗಿ ಬಂದ ವಿದ್ಯಾರ್ಥಿಗಳನ್ನು ಆರತಿ ಎತ್ತಿ ಸ್ವಾಗತಿಸಲಾಯಿತು. ವೇಣೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್ ಹೆಗ್ಡೆ ಅವರು ಶಾಲಾ ಪ್ರಾರಂಭೋತ್ಸವಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ, ಶುಭ ಹಾರೈಸಿದರು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು. ಶಾಲೆಗೆ ನೂತನವಾಗಿ ದಾಖಲಾತಿಗೊಂಡ ವಿದ್ಯಾರ್ಥಿಗಳನ್ನು ಹೂನೀಡಿ ಸ್ವಾಗತಿಸಿಸಲಾಯಿತು.

ಬಳಿಕ ಶಾಲೆಯ ಸಭಾಂಗಣದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ಜಯಶ್ರೀ ಅವರ ಅಧ್ಯಕ್ಷತೆಯಲ್ಲಿ ಪೋಷಕರ ಸಭೆ ನಡೆಯಿತು. ಮಂಗಳೂರು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್ ಅವರು ಸಭೆಗೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಗೈರುಹಾಜರಾಗದಂತೆ ಪೋಷಕರು ನೋಡಿಕೊಳ್ಳಬೇಕು. ವಿದ್ಯಾರ್ಥಿಗಳ ಸ್ವಚ್ಛತೆಗೆ ಗಮನವಹಿಸಬೇಕು, ಮೊಬೈಲ್ಗಳಿಂದ ಮಕ್ಕಳನ್ನು ದೂರವಿರಿಸಿ, ಟಿವಿಗಳು ಕೇವಲ ನ್ಯೂಸ್ ನೋಡುವುದಕ್ಕೆ ಮಾತ್ರವೇ ಸೀಮಿತವಿರಲಿ ಎಂದರು.


ಮಕ್ಕಳ ಬಗ್ಗೆ ಅತಿಯಾದ ನಿರೀಕ್ಷೆ ಬೇಡ
ಮಕ್ಕಳ ಬಗ್ಗೆ ಪೋಷಕರು ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಒಳಿತಲ್ಲ, ಬದಲಾಗಿ ಅವರನ್ನು ಬುದ್ದಿವಂತ ನಾಗರಿಕರನ್ನಾಗಿ ಮಾಡುವಲ್ಲಿ ಪ್ರೇರಣೆ ನೀಡಿ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್ ಎಂದು ಅವರು ಹೇಳಿದರು. ಮಕ್ಕಳ ಅಭಿರುಚಿಗಳನ್ನು ಗಮನಿಸಿ ಅವರ ಆಸಕ್ತಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಪೋಷಕರಿಗೆ ಕರೆ ನೀಡಿದ ಅವರು, ಶಾಲೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲು ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ಸನ್ಮಾನ
ಎಸ್ಡಿಎಂಸಿ ಅಧ್ಯಕ್ಷರಾಗಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ ಎಸ್ಡಿಎಂಸಿ ನಿಕಟಪೂರ್ವ ಅಧ್ಯಕ್ಷರಾದ ದಿನೇಶ್ ಪಿ. ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಜಗನ್ನಾಥ ದೇವಾಡಿಗ ಅವರು ಸನ್ಮಾನಪತ್ರ ವಾಚಿಸಿದರು.

ಸರಕಾರದಿಂದ ಒದಗಿಸಲಾದ ಉಚಿತ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಎಸ್ಡಿಎಂಸಿ ಅಧಿಕಾರ ಹಸ್ತಾಂತರ ನಡೆಯಿತು. ಇಬ್ಬರು ನೂತನ ಸದಸ್ಯರನ್ನು ಎಸ್ಡಿಎಂಗೆ ಆಯ್ಕೆ ಮಾಡಲಾಯಿತು.
ವೇಣೂರು ಗ್ರಾ.ಪಂ. ಸದಸ್ಯರಾದ ಅರುಣ್ ಕ್ರಾಸ್ತ, ಸುನಿಲ್, ಶಿವಾನಂದ ಗೌಡ, ಎಸ್ಡಿಎಂಸಿ ಉಪಾಧ್ಯಕ್ಷ ಲೋಕೇಶ್ ಕೋರ್ಲೋಡಿ, ಎಸ್ಡಿಎಂಸಿ ಸದಸ್ಯರು, ತಾಯಂದಿರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸ್ಪಂದನಾ ಬಳಗ ಪ್ರಾರ್ಥಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ರಶ್ಮಿ ಶೆಟ್ಟಿ ಸ್ವಾಗತಿಸಿ, ಮಕ್ಕಳ ಸುರಕ್ಷತೆ ಮತ್ತು ಆರೋಗ್ಯ ಕಾಳಜಿ ಬಗ್ಗೆ ಹಾಗೂ ಶಾಲೆಯ ಕೆಲವು ನಿಯಮಗಳ ಬಗ್ಗೆ ತಿಳಿಸಿದರು. ಶಿಕ್ಷಕಿಯರಾದ ನಾಗವೇಣಿ ಮತ್ತು ಹರ್ಷಲಾ ನಿರೂಪಿಸಿ, ಶಿಕ್ಷಕಿ ಬಾಲಕ್ಕ ವಂದಿಸಿದರು.



