ವೇಣೂರು: ರಾಜ್ಯದ ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯು ನಿರಂತರವಾಗಿ ಇಳಿಕೆಯಾಗುತ್ತಿದ್ದು, ಪ್ರಸ್ತುತ ರಾಜ್ಯದ ಸರಕಾರಿ ಶಾಲೆಗಳಲ್ಲಿ ಸುಮಾರು 45,39,093 (45.39 ಲಕ್ಷ) ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಶಾಲೆಗಳತ್ತ ಪೋಷಕರ ಒಲವು ಹೆಚ್ಚುತ್ತಿರುವುದರಿಂದ ಕಳೆದ ಮೂರು ವರ್ಷಗಳಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯಲು ಕಾರಣ ಎನ್ನಲಾಗಿದೆ.
ಈ ಮಧ್ಯೆ ಸರಕಾರಿ ಶಾಲೆಯ ಉಳಿವಿಗೆ ಶಾಲೆಯ ಹಳೆ ವಿದ್ಯಾರ್ಥಿಯೊಬ್ಬರು ಹೊಸ ಪ್ರಯತ್ನ ಮಾಡಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ ಹೊಸ ಸಂಚಲನ ಮೂಡಿದೆ.
ಹೌದು, ಬೆಳ್ತಂಗಡಿ ತಾಲೂಕಿನ ಗುಂಡೂರಿ ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಇಳಿಕೆಯಾಗಿದೆ. ಸರಕಾರದ ಸವಲತ್ತಿನ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ಏರಿಕೆಯಾಗುತ್ತಿಲ್ಲ.
ಶೂನ್ಯ ದಾಖಲಾತಿ
ಪ್ರಸಕ್ತ ಸಾಲಿನಲ್ಲಿ ಗುಂಡೂರಿ ಸ.ಕಿ.ಪ್ರಾ. ಶಾಲೆಯಲ್ಲಿ ಒಂದನೇ ತರಗತಿಗೆ ಒಂದೇ ಒಂದು ವಿದ್ಯಾರ್ಥಿಗಳ ದಾಖಲಾತಿಯಾಗಿಲ್ಲ. ಇದು ಮುಂದೊಂದು ದಿನ ಮುಚ್ಚುವ ಹಂತಕ್ಕೆ ತಲುಪಲಿದೆಯೇ ಅನ್ನುವ ಭಯ ಪ್ರಜ್ಞಾವಂತ ಗ್ರಾಮಸ್ಥರನ್ನು ಕಾಡತೊಡಗಿದೆ.
ದಾಖಲಾತಿಯಾಗುವ ಪ್ರತೀ ವಿದ್ಯಾರ್ಥಿಗೆ ರೂ. 5000!
ಹೌದು, ಒಂದನೇ ತರಗತಿಗೆ ದಾಖಲಾತಿಯಾಗುವ ವಿದ್ಯಾರ್ಥಿಗೆ ರೂ. 5000 ಪ್ರೋತ್ಸಾಹ ಧನ ನೀಡುವುದಾಗಿ ಹಿರಿಯ ವಿದ್ಯಾರ್ಥಿಯೊಬ್ಬರು ಘೋಷಿಸಿದ್ದಾರೆ. ದಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಜು. 11ರಂದು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕಲಿಕಾ ಸಾಮಾಗ್ರಿ ವಿತರಣೆ ಕಾರ್ಯಕ್ರಮ ಜರಗಿತ್ತು. ಈ ವೇಳೆ ಶಾಲೆಯ ಹಿರಿಯ ವಿದ್ಯಾರ್ಥಿ, ಆರಂಬೋಡಿ ಗ್ರಾ.ಪಂ. ಮಾಜಿ ಸದಸ್ಯ, ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿರುವ ಲ. ಹರೀಶ್ ಕುಮಾರ್ ಪೊಕ್ಕಿ ಅವರು ಶಾಲೆಯ ದಾಖಲಾತಿ ಪರಿಸ್ಥಿತಿಗೆ ಬೇಸರ ವ್ಯಕ್ತಪಡಿಸಿ, ಒಂದನೇ ತರಗತಿಗೆ ದಾಖಲಾತಿ ಆಗುವ ಮಕ್ಕಳಿಗೆ ತಲಾ 5000 ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದ್ದಾರೆ. ಸಾಮಾಜಿಕವಾಗಿ, ಧಾರ್ಮಿಕವಾಗಿ ತೊಡಗಿಕೊಂಡಿರುವ ಹರೀಶ್ ಕುಮಾರ್ ಅವರು ಊರಿನ ಶಾಲೆಯ ಅಭಿವೃದ್ಧಿ ಹಾಗೂ ಪ್ರೋತ್ಸಾಹದಾಯಕವಾಗಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಕಲಿಕಾ ಸಲಕರಣೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇವರ ಉದಾತ್ತ ಸೇವಾ ಮನೋಭಾವ, ಶಿಕ್ಷಣದ ಮೇಲಿನ ಕಾಳಜಿ ಹಾಗೂ ಶಾಲೆಯ ಮೇಲೆ ತೋರಿರುವ ಪ್ರೀತಿಯ ದ್ಯೋತಕವಾಗಿ ಈ ಘೋಷಣೆ ಮಾಡಿದ್ದು, ನಾಡಿನೆಲ್ಲಡೆ ಪ್ರಸಂಶೆ ವ್ಯಕ್ತವಾಗಿದೆ.
ಊರಿನ ಶಾಲೆ ಮುಚ್ಚಬಾರದು
ಲ. ಹರೀಶ್ ಕುಮಾರ್ ಪೊಕ್ಕಿ ಅವರನ್ನು ನ್ಯೂಸ್ 19 ಕನ್ನಡ ಸಂಪರ್ಕಿಸಿದ್ದು, ‘ನಾನೂ ಕೂಡಾ ಗುಂಡೂರಿ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದೇನೆ. ಮೌಲ್ಯಯುತ ಶಿಕ್ಷಣಕ್ಕೆ ಇಂದಿಗೂ ಈ ಶಾಲೆ ಹೆಸರುವಾಸಿಯಾಗಿದೆ. ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪೂರೈಸಿದವರೇ ಆಗಿದ್ದಾರೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದವರೇ ಇದ್ದಾರೆ. ಇದು ಇಲ್ಲಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ. ಕೇವಲ ೫ನೇ ತರಗತಿವರೆಗೆ ಈ ಶಾಲೆಯಲ್ಲಿ ಇರುವುದಕ್ಕೋ ಏನೋ ಪೋಷಕರು ಈ ಶಾಲೆಗೆ ಮಕ್ಕಳನ್ನು ದಾಖಲಾತಿ ಮಾಡಲು ಮನಸ್ಸು ಮಾಡುತ್ತಿಲ್ಲ. ಉತ್ತಮ ವಾತಾವರಣದಲ್ಲಿ ಸುಸಜ್ಜಿತ ಕಟ್ಟಡವೂ ಇದ್ದು, ಊರಿನ ಶಾಲೆ ಮುಚ್ಚಬಾರದು. ಈ ದೆಸೆಯಲ್ಲಿ ಸಮಾಜಮುಖಿಯಾಗಿದ್ದ ಹೆತ್ತವರ ದಿ. ಪಡುಪಾಲ್ಜಾಲು ಪದ್ಮಪೂಜಾರಿ ಮತ್ತು ದಿ. ಶ್ರೀಮತಿ ಲಕ್ಷ್ಮೀ ಕಾರಂದೂರು ಅವರ ಸವಿನೆನಪಿನಲ್ಲಿ ಗುಂಡೂರಿ ಶಾಲೆಗೆ ಒಂದನೇ ತರಗತಿಗೆ ಪ್ರಸಕ್ತ ಸಾಲಿನಲ್ಲಿ ಅಥವಾ 2027-28ರ ಸಾಲಿಗೆ ದಾಖಲಾತಿ ಪಡೆದ ಮಕ್ಕಳಿಗೆ ತಲಾ ರೂ.5000 ದತ್ತಿನಿಧಿಯಾಗಿ ನೀಡುವುದಾಗಿ ಘೋಷಿಸಿದ್ದೇನೆ ಎಂದಿದ್ದಾರೆ.



