ಬೆಂಗಳೂರು, ಮೇ. 29: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು (ಮೇ 29) ಅಂಗೀಕರಿಸಿದ್ದಾರೆ.
ಸಂವಿಧಾನಬದ್ಧವಾಗಿ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ. ಈ ಬಗ್ಗೆ ಲೋಕಭವನದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಆದರೆ ಹೊಸ ಸರ್ಕಾರ ರಚನೆಯಾಗುವವರೆಗೆ ಸಿದ್ದರಾಮಯ್ಯ ಅವರು ಹಂಗಾಮಿ ಸಿಎಂ ಆಗಲಿದ್ದಾರೆ.ರಾಜ್ಯಪಾಲರು ರಾಜಧಾನಿಯಲ್ಲಿ ಇಲ್ಲದ ಕಾರಣ, ಅವರ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರು ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದರು. ರಾಜೀನಾಮೆ ಪತ್ರವನ್ನ ಕಾರ್ಯದರ್ಶಿಗಳು ಸ್ವೀಕರಿಸಿದರೂ, ಸಂವಿಧಾನದ ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಖುದ್ದಾಗಿ ಸಹಿ ಮಾಡಬೇಕಿತ್ತು. ಗುರುವಾರ (ಮೇ 28) ರಾತ್ರಿ ಇಂದೋರ್ನಿಂದ ಬೆಂಗಳೂರಿಗೆ ಆಗಮಿಸಿದ್ದ ರಾಜ್ಯಪಾಲರು ಇಂದು ಬೆಳಗ್ಗೆ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಹೀಗಾಗಿ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಭರದಿಂದ ಸಾಗಿದೆ.ರಾಜ್ಯಪಾಲರು ರಾಜೀನಾಮೆ ಅಂಗೀಕಾರ ಮಾಡಿದ್ದರಿಂದ ಶನಿವಾರ (ಮೇ 30) ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆಗಳಿವೆ. ಸಿಎಲ್ಪಿ ನಾಯಕರಾಗಿ ಡಿಕೆಶಿ ಆಯ್ಕೆಯಾಗುವುದು ಖಚಿತವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೋಮವಾರ ಸಂಜೆ ಗೋದೂಳಿ ಮುಹೂರ್ತದಲ್ಲಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸೋಮವಾರ ಸಂಜೆ ಲೋಕಭವನದಲ್ಲಿ ಅದ್ಧೂರಿ ಪದಗ್ರಹಣಕ್ಕೆ ಭರದ ಸಿದ್ಧತೆ ನಡೆದಿದೆ.





