ಬೆಂಗಳೂರು, ಮೇ.27: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ನಿನ್ನೆ (ಮೇ 26) ಸಂಜೆ ಭಾರಿ ವಿಮಾನ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಬೆಂಗಳೂರಿನಿಂದ ಚೆನ್ನೈಗೆ ಹೊರಡಬೇಕಾಗಿದ್ದ ಇಂಡಿಗೋ ವಿಮಾನದಲ್ಲಿ ಹಠಾತ್ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬರೋಬ್ಬರಿ 230 ಕ್ಕೂ ಹೆಚ್ಚು ಪ್ರಯಾಣಿಕರನ್ನು ತುರ್ತಾಗಿ ಸ್ಥಳಾಂತರಿಸಲಾಯಿತು. ಆದರೆ, ಈ ವೇಳೆ ವಿಮಾನದ ಸುರಕ್ಷತಾ ತುರ್ತು ದಾರಿಯ ಇನ್ಫ್ಲೇಟಬಲ್ ಸ್ಲೈಡ್ (Inflatable Slide) ಸರಿಯಾಗಿ ತೆರೆದುಕೊಳ್ಳದ ಕಾರಣ, ಪ್ರಯಾಣಿಕರು ಪ್ರಾಣಭಯದಿಂದ ವಿಮಾನದ ಬಲಗಡೆಯ ರೆಕ್ಕೆಯ ಮೇಲೆಯೇ ನಡೆದು ಬಂದಿರುವ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಇಂಡಿಗೋ ಸಂಸ್ಥೆಯ ‘6E 6017’ ವಿಮಾನವು ಪ್ರಯಾಣಿಕರನ್ನು ಹೊತ್ತು ಟೇಕ್-ಆಫ್ ಆಗಲು ರನ್ವೇ ಕಡೆಗೆ ಚಲಿಸುತ್ತಿದ್ದಾಗ (Taxiing) ವಿಮಾನದ ಕ್ಯಾಬಿನ್ ಮತ್ತು ಕಾಕ್ಪಿಟ್ ಒಳಗಡೆ ದಿಢೀರನೆ ದಟ್ಟವಾದ ಹೊಗೆ ಆವರಿಸಿಕೊಂಡಿತು. ಇದನ್ನು ಗಮನಿಸಿದ ಪೈಲಟ್ ತಕ್ಷಣವೇ ವಿಮಾನವನ್ನು ಮಧ್ಯದಲ್ಲೇ ನಿಲ್ಲಿಸಿ, ಗಂಭೀರ ಪರಿಸ್ಥಿತಿ ಘೋಷಿಸಿ ಎಮರ್ಜೆನ್ಸಿ ಎಕ್ಸಿಟ್ (Emergency Evacuation) ಮೂಲಕ ಎಲ್ಲರನ್ನು ಕೆಳಗಿಳಿಸಲು ಸೂಚಿಸಿದರು.
ಈ ವಿಮಾನದಲ್ಲಿದ್ದ ದೀಪನ್ ಕ್ವೀಟರ್ ಕಣ್ಣನ್ ಎಂಬ ಪ್ರಯಾಣಿಕರೊಬ್ಬರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಮಾನದ ಬಲಗಡೆಯ ಓವರ್ವಿಂಗ್ ಎಕ್ಸಿಟ್ನಲ್ಲಿದ್ದ ಸುರಕ್ಷತಾ ಸ್ಲೈಡ್ ಸರಿಯಾಗಿ ಗಾಳ ತುಂಬಿ ಓಪನ್ ಆಗಲೇ ಇಲ್ಲ! ಇದರಿಂದಾಗಿ ಗಾಬರಿಗೊಂಡ ಜನರು ಅನಿವಾರ್ಯವಾಗಿ ವಿಮಾನದ ರೆಕ್ಕೆಯ (Wing) ಮೇಲೆ ಹತ್ತಿ ನಿಲ್ಲಬೇಕಾಯಿತು. ನಂತರ ಅಲ್ಲಿಂದ ಮತ್ತೆ ವಿಮಾನದ ಒಳಗಡೆ ಹೋಗಿ ಬೇರೆ ದಾರಿಯ ಮೂಲಕ ಕೆಳಗಿಳಿಯಬೇಕಾಯಿತು” ಎಂದು ಅವರು ಬರೆದುಕೊಂಡಿದ್ದಾರೆ. “ಡಿಜಿಸಿಎ (DGCA) ಈ ತಾಂತ್ರಿಕ ಲೋಪದ ಬಗ್ಗೆಯೂ ಗಂಭೀರ ತನಿಖೆ ನಡೆಸಬೇಕು. ತುರ್ತು ಸಂದರ್ಭದಲ್ಲಿ ಗಾಬರಿಯಿಂದ ಜನರು ರೆಕ್ಕೆಯ ಮೇಲಿಂದ ಕೆಳಗೆ ಬಿದ್ದು ದೊಡ್ಡ ಅನಾಹುತವೇ ಸಂಭವಿಸಬಹುದಿತ್ತು” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.





