ಪರಿಶ್ರಮ ಹಾಗೂ ಶಿಸ್ತಿನಿಂದ ಮುನ್ನಡೆದಾಗ ಜೀವನದಲ್ಲಿ ಯಶಸ್ಸು: ಗಿರೀಶ್ ಕೆ.ಎಚ್.
ವೇಣೂರು: ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಸಂಕಲ್ಪ-2026 ಓರಿಯಂಟೇಷನ್ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಗಿರೀಶ್ ಕೆ. ಹೆಚ್. ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆಯ ಸ್ಪಷ್ಟ ಗುರಿಯನ್ನು ಹೊಂದಬೇಕು, ನಿರಂತರ ಪರಿಶ್ರಮ ಹಾಗೂ ಶಿಸ್ತಿನಿಂದ ಮುನ್ನಡೆದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಭೋದಿನಿ ವಿದ್ಯಾ ಕೇಂದ್ರ ಕಳಸ ಇಲ್ಲಿಯ ಮುಖ್ಯೋಪಾಧ್ಯಾಯರಾದ ಆನಂದ್ ಕೆ.ಸಿ. ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಹೇಳಿದರು.
ಇಂದಿರಾಗಾಂಧಿ ವಸತಿ ಶಾಲೆ ಗೇರುಪುರ ಇಲ್ಲಿಯ ಪ್ರಾಂಶುಪಾಲರಾದ ಚಂದ್ರಶೇಖರ್ ಎಂ.ಪಿ., ಅವರು ಮಾತನಾಡಿ, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಕಠಿಣ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಗಾಂಧಿನಗರ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಅರವಿಂದ ಉಪಸ್ಥಿತರಿದ್ದರು.
ವಿಜ್ಞಾನ ವಿಭಾಗದ ಕುರಿತು ಮನೋಜ್ ಎಸ್., ಜೀವಶಾಸ್ತ್ರ ವಿಭಾಗದ ಉಪನ್ಯಾಸಕರು ಹಾಗೂ ವಾಣಿಜ್ಯ ಮತ್ತು ಗಣಕಶಾಸ್ತ್ರ ಕ್ಷೇತ್ರಗಳ ಅವಕಾಶಗಳ ಕುರಿತು ಅಭಿಲಾಷ್ ಕಾಮತ್, ಗಣಕಶಾಸ್ತ್ರ ವಿಭಾಗದ ಉಪನ್ಯಾಸಕರು ಮಾಹಿತಿ ನೀಡಿದರು. ವಿವಿಧ ಶೈಕ್ಷಣಿಕ ವಿಭಾಗಗಳ ಕುರಿತು ನಡೆದ ಓರಿಯಂಟೇಷನ್ ಅಧಿವೇಶನವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡರು.
ಕುಂಭಶ್ರೀ ಶಿಕ್ಷಣ ಸಂಸ್ಥೆಯ ಸಂಚಾಲಕ ಲೆಫ್ಟಿನೆಂಟ್ ಅಶ್ವಿತ್ ಕುಲಾಲ್ ಸ್ವಾಗತಿಸಿದರು. ಉಪನ್ಯಾಸಕರಾದ ಶರಣ್ಯ ಕೆ.ಎಸ್. ಹಾಗೂ ಸುಮನ್ ನಿರೂಪಿಸಿದರು. ಉಪನ್ಯಾಸಕ ದೀಪಕ್ ಸಾಲಿಯಾನ್ ವಂದಿಸಿದರು.





