ಪಿಎನ್ಜಿ ನೈಸರ್ಗಿಕ ಅನಿಲವಾದರೆ, ಎಲ್ಪಿಜಿ ಒಂದು ಪೆಟ್ರೋಲಿಯಂ ಗ್ಯಾಸ್. ಎಲ್ಪಿಜಿಯಲ್ಲಿ ಅನಿಲವನ್ನು ದ್ರವೀಕರಿಸಿ ಸಿಲಿಂಡರ್ಗಳಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತದೆ. ಆದರೆ, ಪಿಎನ್ಜಿಯನ್ನು ನೀರಿನ ನಳ್ಳಿ ರೀತಿಯಲ್ಲಿ ಕೊಳವೆ ಮೂಲಕ ಪೂರೈಕೆ ಮಾಡಲಾಗುತ್ತದೆ. ಪಿಎನ್ಜಿಯಲ್ಲಿ ಅರ್ಧದಷ್ಟನ್ನು ಭಾರತದಲ್ಲೇ ತಯಾರಿಸಲಾಗುತ್ತದೆ.
ನವದೆಹಲಿ, ಮಾರ್ಚ್ 16: ಭಾರತದಲ್ಲಿ ಎಲ್ಪಿಜಿಗೆ (LPG) ತುಸು ಹಾಹಾಕಾರ ನಡೆಯುತ್ತಿದೆ. ಸರ್ಕಾರ ಎಲ್ಪಿಜಿ ಪೂರೈಕೆ ಸರಿಯಾಗಿ ಇದೆ ಎಂದು ಹೇಳಿದರೂ ಸಿಲಿಂಡರ್ ಬುಕಿಂಗ್ ಆಗದೇ ಇರುವುದು, ಡೆಲಿವರಿ ವಿಳಂಬ ಆಗುತ್ತಿರುವುದು ಇತ್ಯಾದಿ ಸಮಸ್ಯೆ ಇದೆ. ಇದೇ ವೇಳೆ, ಪೈಪ್ಡ್ ಗ್ಯಾಸ್ ಅಥವಾ ಪಿಎನ್ಜಿ ಬಳಕೆದಾರರಿಗೆ (PNG users) ಗ್ಯಾಸ್ ಪೂರೈಕೆ ನಿಂತಿಲ್ಲ. ಪ್ರಧಾನಿಗಳು ಇತ್ತೀಚೆಗೆ, ಪಿಎನ್ಜಿ ಬಳಕೆ ಮಾಡುವಂತೆ ಜನರಿಗೆ ಕರೆ ಕೂಡ ಮಾಡಿದ್ದಾರೆ. ಹಾಗಾದರೆ, ಪಿಎನ್ಜಿ ಗ್ಯಾಸ್ ಮತ್ತು ಎಲ್ಪಿಜಿ ನಡುವೆ ವ್ಯತ್ಯಾಸವೇನು?
ಎಲ್ಪಿಜಿ ಮತ್ತು ಪಿಎನ್ಜಿ ನಡುವೆ ವ್ಯತ್ಯಾಸವೇನು?
ಎಲ್ಪಿಜಿ ಎಂಬುದು ಪೆಟ್ರೋಲಿಯಂ ಉತ್ಪನ್ನ. ಇದು ಕಚ್ಚಾ ತೈಲದಿಂದ ಸಿಗುವ ಒಂದು ಉಪ ಉತ್ಪನ್ನ. ಗ್ಯಾಸ್ ಅನ್ನು ದ್ರವೀಕರಿಸಿ ಸಿಲಿಂಡರ್ನಲ್ಲಿ ತುಂಬಿಸಿ ಸರಬರಾಜು ಮಾಡಲಾಗುತ್ತದೆ.
ಪಿಎನ್ಜಿ ಎಂಬುದು ಪೈಪ್ಡ್ ನ್ಯಾಚುರಲ್ ಗ್ಯಾಸ್. ಇದು ನೈಸರ್ಗಿಕ ಅನಿಲ. ನೀರನ್ನು ನಲ್ಲಿ ಮೂಲಕ ಸರಬರಾಜು ಮಾಡಲಾಗುವಂತೆ, ಪಿಎನ್ಜಿಯನ್ನು ಕೊಳವೆ ಮೂಲಕ ಮನೆ ಮನೆಗಳಿಗೆ ಪೂರೈಕೆ ಮಾಡಲಾಗುತ್ತದೆ.
ದೇಶದಲ್ಲಿ ಹೆಚ್ಚಿನ ಮನೆಗಳಲ್ಲಿ ಎಲ್ಪಿಜಿ ಸಂಪರ್ಕ ಇದೆ. 32 ಕೋಟಿಗೂ ಅಧಿಕ ಮನೆಗಳು ಎಲ್ಪಿಜಿ ಗ್ಯಾಸ್ ಸೌಲಭ್ಯ ಪಡೆದಿವೆ. ಆದರೆ, ಪಿಎನ್ಜಿ ಸಂಪರ್ಕ ಹೊಂದಿರುವ ಮನೆಗಳ ಸಂಖ್ಯೆ ಒಂದೂವರೆ ಕೋಟಿಗಿಂತ ತುಸು ಹೆಚ್ಚು. ಈಗೀಗ ಇದರ ಬಳಕೆ ಮತ್ತು ಸಂಪರ್ಕ ಜಾಲ ಹೆಚ್ಚುತ್ತಿದೆ.
ಪಿಎನ್ಜಿ ಪೂರೈಕೆಯಲ್ಲಿ ಹೆಚ್ಚು ವ್ಯತ್ಯಯ ಆಗದಿರುವುದು ಯಾಕೆ?
ಭಾರತಕ್ಕೆ ಬೇಕಾದ ಎಲ್ಪಿಜಿಯಲ್ಲಿ ಶೇ. 60ಕ್ಕಿಂತ ಹೆಚ್ಚಿನ ಭಾಗವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆಮದು ಮಾಡಿಕೊಳ್ಳಲಾಗುತ್ತಿರುವ ಎಲ್ಪಿಜಿಯಲ್ಲಿ ಶೇ. 80ಕ್ಕಿಂತ ಹೆಚ್ಚಿನಷ್ಟನ್ನು ಕೊಲ್ಲಿ ರಾಷ್ಟ್ರಗಳಿಂದ ಪಡೆಯಲಾಗುತ್ತಿದೆ. ಹೀಗಾಗಿ, ಇರಾನ್ ಯುದ್ಧದ ಪರಿಣಾಮವಾಗಿ ಎಲ್ಪಿಜಿ ಪೂರೈಕೆಯಲ್ಲಿ ಗಣನೀಯವಾದ ತೊಂದರೆ ಆಗಿದೆ.
ಆದರೆ, ನೈಸರ್ಗಿಕ ಅನಿಲ ಭಾರತದಲ್ಲೂ ಲಭ್ಯ ಇದೆ. ಭಾರತಕ್ಕೆ ಬೇಕಾದ ಪಿಎನ್ಜಿಯಲ್ಲಿ ಅರ್ಧದಷ್ಟು ಭಾರತದಲ್ಲೇ ಲಭ್ಯ ಇದೆ. ಉಳಿದವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ, ಆಮದು ಮಾಡಿಕೊಳ್ಳಲು ಒಂದು ಪ್ರದೇಶದ ಮೇಲೆ ಅವಲಂಬಿತವಾಗದೆ, ಅಮೆರಿಕ, ಆಸ್ಟ್ರೇಲಿಯಾ ಇತ್ಯಾದಿ ಹಲವಾರು ರಾಷ್ಟ್ರಗಳಿಂದ ಅದನ್ನು ಪಡೆಯಲಾಗುತ್ತಿದೆ. ಹೀಗಾಗಿ, ಪಿಎನ್ಜಿ ಪೂರೈಕೆಯಲ್ಲಿ ಭಾರತಕ್ಕೆ ಅಷ್ಟೇನೂ ತೊಂದರೆ ಆಗದಿರಬಹುದು.
ಭಾರತದಲ್ಲಿ ಪಿಎನ್ಜಿ ಸಂಪರ್ಕ ಪಡೆಯುವುದು ಹೇಗೆ?
ಭಾರತದಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಪಿಎನ್ಜಿ ಸಂಪರ್ಕ ಸೌಲಭ್ಯ ಇದೆ. ಇಂಡಿಯನ್ ಆಯಿಲ್, ಬಿಪಿಸಿಎಲ್, ಅದಾನಿ ಟೋಟಲ್ ಗ್ಯಾಸ್, ಜಿಎಐಎಲ್ ಇತ್ಯಾದಿ ಸಂಸ್ಥೆಗಳು ಪಿಎನ್ಜಿ ಸೌಲಭ್ಯ ನೀಡುತ್ತವೆ. ಐಜಿಎಲ್, ಎಂಜಿಎಲ್, ಆವಂತಿಕಾ ಗ್ಯಾಸ್, ಜಿಜಿಎಲ್ ಇತ್ಯಾದಿ ಇನ್ನೂ ಅನೇಕ ಸಂಸ್ಥೆಗಳು ಈ ಸೇವೆ ನೀಡುತ್ತವೆ. ಬೆಂಗಳೂರಿನಲ್ಲಿ ಜಿಎಐಎಲ್ ಸಂಸ್ಥೆ ಪಿಎನ್ಜಿ ಸಂಪರ್ಕ ನೀಡುತ್ತದೆ. ಜಿಎಐಎಲ್ನ ಅಧಿಕೃತ ವೆಬ್ಸೈಟ್ಗೆ ಹೋಗಿ ನೀವಿರುವ ಪ್ರದೇಶದ ಸಮೀಪ ಪಿಎನ್ಜಿ ಜಾಲ ಇದ್ದರೆ ಪರಿಶೀಲಿಸಿ, ಕನೆಕ್ಷನ್ಗೆ ಅರ್ಜಿ ಸಲ್ಲಿಸಬಹುದು.





