ಕುಂದಾಪುರ: ಕಂಡ್ಲೂರಿನ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಬ್ ಇನ್ಸ್ಪೆಕ್ಟರ್ ನಾಸೀರ್ ಹುಸೇನ್ (52) ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಇಂದು ಆದಿತ್ಯವಾರ ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಲ್ಲರಿಗೂ ಫಿಟ್ನೆಸ್ ಡಬ್ ಫ್ರೀ ಕರ್ನಾಟಕ ಸೈಬರ್ ಜಾಗ್ರತಿಗಾಗಿ 5 ಕಿ. ಮೀ. ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿತ್ತು. ಎಸ್ಐ ನಾಸೀರ್ ಹುಸೇನ್ ಸೇರಿದಂತೆ ನೂರಾರು ಪೊಲೀಸರು ಇದರಲ್ಲಿ ಭಾಗವಹಿಸಿದ್ದರು. ಮ್ಯಾರಥಾನ್ ಓಡುತ್ತಿದ್ದ ನಾಸೀರ್ ಹುಸೇನ್ ಅವರ ಎದೆಯಲ್ಲಿ ಒಮ್ಮೆಗೆ ನೋವು ಕಾಣಿಸಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಗಿದ್ದರೂ ಮಾರ್ಗಮಧ್ಯದಲ್ಲೇ ಅವರು ಇಹಲೋಕ ತ್ಯಜಿಸಿದ್ದಾರೆ. ಇಲಾಖೆಯಲ್ಲಿ ಕರ್ತವ್ಯನಿಷ್ಠೆಯುಳ್ಳ ಸದಾ ಚುರುಕು ಹಾಗೂ ಸಾರ್ವಜನಿಕ ವಲಯದಲ್ಲಿ ಸ್ನೇಹಪರ ವ್ಯಕ್ತಿತ್ವದ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ನಾಸೀರ್ ಹುಸೇನ್ ಮೂಲತ: ಚಿಕ್ಕಮಗಳೂರಿನವರಾಗಿದ್ದು ಒಂದಷ್ಟು ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಪೊಲೀಸ್ ಇಲಾಖೆ ಸೇರಿದ ಇವರು ಚಿಕ್ಕಮಗಳೂರು ಜಿಲ್ಲೆಯ ಠಾಣೆಗಳಲ್ಲಿ ಸೇರಿದಂತೆ, ಉಡುಪಿ ಜಿಲ್ಲೆಯ ಅಮಾಸೆಬೈಲ್, ಕುಂದಾಪುರ ನಗರ, ಕುಂದಾಪುರ ಸಂಚಾರ ಠಾಣೆ, , ಕಾರ್ಕಳ, ಶಂಕರನಾರಾಯಣ, ಕೊಲ್ಲೂರು ಹಾಗೂ ಕೊನೆಯದಾಗಿ ಕಂಡ್ಲೂರಿನ ಗ್ರಾಮಾಂತರ ಠಾಣೆಯಲ್ಲಿ ಸೇವೆಯಲ್ಲಿದ್ದರು.





