ಇತ್ತೀಚೆಗೆ ಮಂಟಪಗಳಲ್ಲಿ ಕೊನೆ ಕ್ಷಣದಲ್ಲಿ ಮದುವೆಗಳು ಮುರಿದುಬೀಳುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದ ಮದುವೆ ಪ್ರಕರಣವು ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ನಂಬಿಕೆಯ ಮೇಲೆ ನಿಲ್ಲಬೇಕಾದ ಮದುವೆಯು ವಂಚನೆಯ ಆರೋಪದಿಂದಾಗಿ ಮಂಟಪದಲ್ಲೇ ಮುರಿದುಬಿದ್ದಿದೆ. ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಎನ್ನುವುದು ಹಳೆಯ ಗಾದೆಯ ಮಾತು. ಆದರೆ ಮದುವೆ ಮುರಿದು ಬೀಳಲು ಈಗ ಸುಳ್ಳೇ ಕಾರಣವಾಗಿದೆ.
ಶೃಂಗೇರಿಯ ಈಡಿಗ ಸಮುದಾಯ ಭವನದಲ್ಲಿ ದೀಕ್ಷಿತ್ ಮತ್ತು ಸುಷ್ಮಾ ಎಂಬುವವರ ವಿವಾಹ ನಿಶ್ಚಯವಾಗಿತ್ತು. ಸುಷ್ಮಾ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ಅವರಿಗೆ ಪುತ್ರ ಕೂಡ ಇದ್ದಾನೆ. ಮಗನನ್ನು ಒಪ್ಪಿಕೊಂಡು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಭರವಸೆಯ ಮೇಲೆ ಅವರು ಈ ಮದುವೆಗೆ ಒಪ್ಪಿದ್ದರು. ಆದರೆ ಮಂಟಪದಲ್ಲಿ ಮುಹೂರ್ತಕ್ಕೆ ಕೆಲವೇ ಸಮಯ ಬಾಕಿ ಇರುವಾಗ ಶಾಸ್ತ್ರಗಳು ನಡೆಯುತ್ತಿದ್ದಾಗಲೇ ಅನಾಮಧೇಯ ಪತ್ರವೊಂದು ಸುಷ್ಮಾ ಅವರ ಕೈಸೇರಿತ್ತು.
ಐದು ಪುಟಗಳ ಪತ್ರದಲ್ಲಿ ಸ್ಫೋಟಕ ಮಾಹಿತಿ ಮದುವೆ ಸಂಭ್ರಮದಲ್ಲಿದ್ದ ಸುಷ್ಮಾ ಅವರಿಗೆ ಅಪರಿಚಿತರಿಂದ ಬಂದ ಐದು ಪುಟಗಳ ದೂರು ಪತ್ರ ಎಲ್ಲವನ್ನೂ ಬದಲಿಸಿತು. ಆ ಪತ್ರದಲ್ಲಿ ದೀಕ್ಷಿತ್ ಬಗ್ಗೆ ಗಂಭೀರ ಆರೋಪಗಳಿದ್ದವು ಎನ್ನಲಾಗಿದೆ. ದೀಕ್ಷಿತ್ ಮೇಲೆ ಹಲವು ಪೊಲೀಸ್ ಕೇಸ್ಗಳಿವೆ ಎಂಬ ಮಾಹಿತಿ, ಅಲ್ಲದೆ ಈ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ದೀಕ್ಷಿತ್ ಆರೋಪಿ, ಜೊತೆಗೆ ವರ ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದಾನೆ ಎನ್ನುವ ಆರೋಪ, ದೀಕ್ಷಿತ್ ತನ್ನ ತಾಯಿಯ ಆರೋಗ್ಯ ಸ್ಥಿತಿಯ ಬಗ್ಗೆಯೂ ಸತ್ಯ ಮರೆಮಾಚಿದ್ದಾರೆ ಎಂದು ಸುಷ್ಮಾ ದೂರಿದ್ದಾರೆ.
ನಂಬಿಕೆಯಿಲ್ಲದ ಮದುವೆ ಬೇಡ ಎಂದ ವಧು ಈ ಪತ್ರದ ಬಗ್ಗೆ ಸುಷ್ಮಾ ಅವರು ವರನ ಕುಟುಂಬವನ್ನು ಪ್ರಶ್ನಿಸಿದಾಗ, ಅವರು ಸ್ಪಷ್ಟ ಉತ್ತರ ನೀಡದೆ “ಮದುವೆಯಾದ ಮೇಲೆ ಮಾತನಾಡೋಣ” ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಇದರಿಂದ ಅನುಮಾನಗೊಂಡ ಸುಷ್ಮಾ, ವಿಶ್ವಾಸವೇ ಇಲ್ಲದ ಜೀವನ ಆರಂಭಿಸಲು ಸಾಧ್ಯವಿಲ್ಲ, ನಂಬಿಕೆಯಿಲ್ಲದ ಮದುವೆ ನನಗೆ ಬೇಡ ಎಂದು ಹೇಳಿ ಮದುವೆ ಮಂಟಪದಿಂದಲೇ ಹೊರನಡೆದಿದ್ದಾರೆ.
ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದಾಗ ಶೃಂಗೇರಿ ಪೊಲೀಸರು ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಸಂಧಾನಕ್ಕೆ ಯತ್ನಿಸಿದರು. ಆದರೆ ಸುಷ್ಮಾ ಅವರು ದೀಕ್ಷಿತ್ ಜೊತೆ ಬದುಕು ನಡೆಸಲು ನಿರಾಕರಿಸಿದರು. ಅಂತಿಮವಾಗಿ ಮದುವೆ ರದ್ದಾಯಿತು ಮತ್ತು ವರನ ಕಡೆಯವರು ಸ್ಥಳದಿಂದ ನಿರ್ಗಮಿಸಿದರು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಮದುವೆಯಂತಹ ಪವಿತ್ರ ಬಂಧನದಲ್ಲಿ ಪ್ರಾಮಾಣಿಕತೆ ಎಷ್ಟು ಮುಖ್ಯ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಮದುವೆಯಂತಹ ಪ್ರಮುಖ ನಿರ್ಧಾರಗಳಲ್ಲಿ ಸಂಪೂರ್ಣ ಮಾಹಿತಿ ಹಂಚಿಕೊಳ್ಳುವುದು ಅಗತ್ಯ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.





