ಮಹಾಶಿವರಾತ್ರಿ ಹಬ್ಬವನ್ನು ಕರ್ನಾಟಕದಾದ್ಯಂತ ಅಪಾರ ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು. ಮಲೆ ಮಹದೇಶ್ವರ, ಮುರುಡೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಲಕ್ಷಾಂತರ ಭಕ್ತರು ಶಿವನಾಮ ಸ್ಮರಣೆಯಲ್ಲಿ ತೊಡಗಿದರು. ವಿಶೇಷ ಪೂಜೆ, ಜಾಗರಣೆಗಳು ನೆರವೇರಿದವು. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಮಾಜಿ ಪ್ರಧಾನಿಗಳು ಸೇರಿದಂತೆ ಹಲವು ಗಣ್ಯರು ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದರು.

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಜಾಗರಣೋತ್ಸವ ಭಕ್ತಿ ಸಂಭ್ರಮದಿಂದ ಜರುಗಿತು. ಈಶ್ವರನಿಗೆ ಬಿಲ್ಪತ್ರೆ ಸೇವೆ, ಕ್ಷೀರಾಭಿಷೇಕ ಸೇರಿದಂತೆ ವಿವಿಧ ವಿಶೇಷ ಪೂಜೆಗಳು ನಡೆದವು. ರಾತ್ರಿಯಿಡೀ ಶಿವನಾಮ ಸ್ಮರಣೆ ಮಾಡಿ ಭಕ್ತರು ಖುಷಿ ಪಟ್ಟರು.
ಮಹಾಶಿವರಾತ್ರಿ ನಿಮಿತ್ತ ಸಿದ್ದರಾಮಯ್ಯ ಚಾಮರಾಜಪೇಟೆಯ ಮಹದೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸಚಿವ ಕೆ.ವೆಂಕಟೇಶ್ ಉಪಸ್ಥಿತರಿದ್ದರು. ಭಕ್ತರೊಂದಿಗೆ ದೇವರ ದರ್ಶನ ಪಡೆದು ರಾಜ್ಯದ ಸುಖಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಕಪುರ ತಾಲೂಕಿನ ಮಡಿವಾಳ ಗ್ರಾಮದ ಶಿವನಾಂಕೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಭೇಟಿ ವೇಳೆ ಅಭಿಮಾನಿಗಳು “ಮುಂದಿನ ಸಿಎಂ” ಎಂಬ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಶಿವರಾತ್ರಿ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಸನ ಜಿಲ್ಲೆಯ ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲಿ ಕುಲದೇವರಿಗೆ ಮಹಾಶಿವರಾತ್ರಿ ಪೂಜೆ ಸಲ್ಲಿಸಿದರು. ಈ ವೇಳೆ ಎಚ್.ಡಿ.ರೇವಣ್ಣ ಉಪಸ್ಥಿತರಿದ್ದು ಕುಟುಂಬ ಸಮೇತ ವಿಶೇಷ ಪೂಜೆಯಲ್ಲಿ ಭಾಗವಹಿಸಿದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರಿನ ಜೆಪಿ ನಗರದ ತಿರುಮಲಗಿರಿ ವೆಂಕಟೇಶ್ವರ ದೇವಾಲಯದಲ್ಲಿ ದೇವೇಗೌಡರೊಂದಿಗೆ ಶಿವರಾತ್ರಿ ಪೂಜೆ ಸಲ್ಲಿಸಿದರು. ಭಕ್ತರೊಂದಿಗೆ ದರ್ಶನ ಪಡೆದು ರಾಜ್ಯದ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಿದರು.
ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರ್.ಟಿ ನಗರ ಶ್ರೀಕಂಠೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಇನ್ನು ಕೇಂದ್ರ ಸಚಿವ ವಿ.ಸೋಮಣ್ಣ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಶಿವಧ್ಯಾನದಲ್ಲಿ ಪಾಲ್ಗೊಂಡರು.





