ಮೂಡುಬಿದಿರೆ: ಕಳೆದ ಮೂರು ದಶಕಗಳಿಂದ ಮೂಡುಬಿದಿರೆಯಲ್ಲಿ ಪ್ರತೀಕ್ಷಾ ಫ್ಯಾನ್ಸಿ ಆ್ಯಂಡ್ ಗಿಫ್ಟ್ ಸೆಂಟರ್’ ನಡೆಸಿಕೊಂಡು ಬರುತ್ತಿದ್ದ ಉದ್ಯಮಿ, ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದ ಉಷಾ ಆರ್. ರಾವ್ ಅವರು ಅನಾರೋಗ್ಯದಿಂದ ನಿಧನ ಹೊಂದಿದರು.
ಮೃತರು ಪತಿ, ಉದ್ಯಮಿ ರಮೇಶ್ ಕೆ. ರಾವ್, ಪುತ್ರ ಪುತ್ರಿಯನ್ನು ಅಗಲಿದ್ದಾರೆ. ‘ಶರಧಿ’ ಕಾವ್ಯನಾಮದೊಂದಿಗೆ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟ ಉಷಾ ರಾವ್ ಅವರು ‘ಶರದಿ ಕಾದಿದೆ’ ಕವನ ಸಂಕಲನದ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ್ದರು. ನಂತರ ಕಾಗದದ ದೋಣಿ, ಅವಧಿ ನೀ-ನಾದ ನಾ ನಿನಾದ, ಬಿಸಿಲು ಹೊತ್ತ ಬೆಳದಿಂಗಳು, ಕಲಾಕೃತಿಯಾದ ಚಂದನದ ಗೊಂಬೆ, ಉಸಿರು ಉಸಿರ ಸಪ್ತಸ್ವರ ಸೇರಿದಂತೆ ಹಲವು ಕೃತಿಗಳನ್ನು ರಚಿಸಿ ಪ್ರಕಟಿಸಿದ್ದರು. ಅವರು ಪ್ರತಿದಿನ ಬರೆದಿಟ್ಟ ಬರಹಗಳನ್ನು ಆನ್ಲೈನ್ ಪ್ರತಿಲಿಪಿಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದ್ದು ವಿಶೇಷ.
ಅವರ ಪುಸ್ತಕಗಳನ್ನು ಕರ್ನಾಟಕ ಸರ್ಕಾರದ ಗ್ರಂಥಾಲಯ ಇಲಾಖೆ ಮಾತ್ರವಲ್ಲದೆ, ಪಶ್ಚಿಮ ಬಂಗಾಳದ ಗ್ರಂಥಾಲಯ ಇಲಾಖೆಯ ಕನ್ನಡ ವಿಭಾಗವೂ ಖರೀದಿಸಿರುವುದು ಗಮನಾರ್ಹ. ಬೆಂಗಳೂರಿನ ಫೇಸ್ ಫೌಂಡೇಶನ್ ಟ್ರಸ್ಟ್, ವಿಕ್ರಮ ಪ್ರಕಾಶನ ಸೇರಿದಂತೆ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳ ಮೂಲಕ ಇವರ ಕೃತಿಗಳು ಪ್ರಕಟವಾಗಿವೆ.





