ಕಾಫಿ ಕೊಯ್ಲು ಕೆಲಸಕ್ಕೆ ಹೋಗುವ ಕಾರ್ಮಿಕ ದಂಪತಿ ತಮ್ಮ ಇಬ್ಬರು ಮಕ್ಕಳನ್ನೂ ಕರೆದೊಯ್ದಿದ್ದರು. ಮಕ್ಕಳೂ ಕಾಫಿ ತೋಟದಲ್ಲಿ ಆಟ ಆಡಿಕೊಂಡು ಖುಷಿಯಾಗಿದ್ದರು. ಆದರೆ ಸಂಜೆ ವೇಳೆ ಕೆಲಸ ಮುಗಿಸಿ ಹೊರಡುವಾಗ ಮಕ್ಕಳಿಬ್ಬರ ಪೈಕಿ 2 ವರ್ಷದ ಹೆನ್ಣು ಮಗು ನಾಪತ್ತೆಯಾಗಿರೋದು ಪೋಷಕರಿಗೆ ಗೊತ್ತಾಗಿದೆ. ಕೂಡಲೇ ಅವರು ಪೂರ್ತಿ ಕಾಫಿ ತೋಟ ಹುಡುಕಾಡಿದ್ದಾರೆ. ಅರಣ್ಯ ಇಲಾಖೆಯವರೂ ಸ್ಥಳಕ್ಕೆ ಬಂದು ಜಾಲಾಡಿದ್ದಾರೆ. ಆದರೆ ಮಗುವನ್ನು ಹುಡುಕಿದ್ದು ಮಾತ್ರ ನೀಯತ್ತಿಗೆ ಹೆಸರಾದ ಪ್ರಾಣಿ.
ಘಟನೆ ಏನು?
ಕಾಫಿ ಕೊಯ್ಲು ಹಿನ್ನೆಲೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ ಕಾರ್ಮಿಕ ದಂಪತಿ ಸುನಿಲ್ ಮತ್ತು ನಾಗಿಣಿ ತಮ್ಮ ಇಬ್ಬರು ಮಕ್ಕಳನ್ನುಜೊತೆಯೇ ಕರೆದೊಯ್ದಿದ್ದರು. ಕಾಫಿ ತೋಟದಲ್ಲಿ ಕೆಲಸ ನಿರತರಾಗಿದ್ದ ಅವರು ಸಂಜೆ ವೇಳೆ ಗಮನಿಸಿದಾಗ ಇಬ್ಬರು ಮಕ್ಕಳ ಪೈಕಿ 2 ವರ್ಷದ ಮಗು ಸುಕನ್ಯಾ ನಾಪತ್ತೆಯಾಗಿರೋದು ಗೊತ್ತಾಗಿದೆ. ಮಗಳಿಗಾಗಿ ಒಂದಿಷ್ಟು ಹುಡುಕಾಡಿದ್ದಾರೆ. ಅದರೆ ಮಗು ಪತ್ತೆಯಾದ ಕಾರಣ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುಟ್ಟಿಸಿದ್ದಾರೆ. ತಕ್ಷಣ ಅವರೂ ಕೂಡ ಸ್ಥಳಕ್ಕೆ ಬಂದಿದ್ದು, ಸುಕನ್ಯಾಗಾಗಿ ಕಾಫಿ ತೋಟದ ತುಂಬ ಜಾಲಾಡಿದ್ದಾರೆ. ಆದರೆ, ಮಧ್ಯರಾತ್ರಿವರೆಗೆ ಹುಡುಕಿದರೂ ಮಗು ಪತ್ತೆಯಾಗಿರಲಿಲ್ಲ.
ಮಗು ಪತ್ತೆ ಮಾಡಿದ ಓರಿಯೋ
ಅರಣ್ಯ ಇಲಾಖೆ ಅಧಿಕಾರಿಗಳು ಮರುದಿನವೂ ಸುಕನ್ಯಾಗಾಗಿ ಹುಡುಕಾಟ ಮುಂದುವರಿಸಿದ್ದು, ಮಗು ಪತ್ತೆಗಾಗಿ ಅನಿಲ್ ಎಂಬುವರ ಶ್ವಾನಗಳನ್ನು ಕೂಡ ಬಳಕೆ ಮಾಡಿಕೊಂಡಿದ್ದರು. ಈ ವೇಳೆ ಆ ನಾಯಿಗಳ ಪೈಕಿ ಒಂದು ಶ್ವಾನ ಸುಕನ್ಯಾಳನ್ನ ಪತ್ತೆ ಮಾಡಿದೆ. ಓರಿಯೋ ಹೆಸರಿನ ಶ್ವಾನ ಕಾಫಿ ತೋಟದ ಎತ್ತರದ ಪ್ರದೇಶದಲ್ಲಿ ಮಗು ನೋಡಿ ಬೊಗಳಲು ಆರಂಭಿಸಿದೆ. ಹೀಗಾಗಿ ಆ ಭಾಗದಲ್ಲಿ ನೋಡಿದಾಗ ಸುಕನ್ಯಾ ಪತ್ತೆಯಾಗಿದ್ದಾಳೆ. ದಟ್ಟ ಕಾರ್ಗತ್ತಲಿನಲ್ಲೇ ಒಂದು ದಿನ ಕಳೆದಿದ್ದ ಮಗು ಸುರಕ್ಷಿತವಾಗಿ ಮನೆಗೆ ಮರಳಿದೆ. ಮಗಳ ನಾಪತ್ತೆಯಿಂದ ಕಂಗಾಲಾಗಿದ್ದ ಸುನಿಲ್ ಮತ್ತು ನಾಗಿಣಿ ದಂಪತಿ ನಿಟ್ಟುಸಿರು ಬಿಟ್ಟಿದ್ದಾರೆ.





