ಉತ್ತರ ಪ್ರದೇಶದಲ್ಲಿ ಬುಧವಾರ ಬೀಸಿದ ಭೀಕರ ಬಿರುಗಾಳಿ ಮತ್ತು ಮಳೆಗೆ ರಾಜ್ಯಾದ್ಯಂತ ಇದುವರೆಗೆ 74 ಜನರು ಬಲಿಯಾಗಿದ್ದಾರೆ. ಪ್ರಯಾಗ್ರಾಜ್ ಮತ್ತು ಉನ್ನಾವ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಾವು-ನೋವುಗಳು ಸಂಭವಿಸಿದ್ದು, ನೂರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆ 38 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಉತ್ತರ ಪ್ರದೇಶದಲ್ಲಿ ಬುಧವಾರ ಬೀಸಿದ ಭೀಕರ ಬಿರುಗಾಳಿ, ಮಳೆ ಮತ್ತು ಆಲಿಕಲ್ಲು ಮಳೆಗೆ ಇಡೀ ರಾಜ್ಯವೇ ತತ್ತರಿಸಿದೆ. ಪ್ರಕೃತಿಯ ಈ ರೌದ್ರಾವತಾರಕ್ಕೆ ವಿವಿಧ ಜಿಲ್ಲೆಗಳಲ್ಲಿ ಗೋಡೆ ಕುಸಿತ, ಮರಗಳು ಬಿದ್ದಿರುವುದು ಮತ್ತು ಸಿಡಿಲು ಬಡಿದ ಘಟನೆಗಳಲ್ಲಿ ಇದುವರೆಗೆ ಸುಮಾರು 74 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ.





