3,932 ಪುಟಗಳ ಪ್ರಾಥಮಿಕ ಹಂತದ ದೋಷಾರೋಪ ಪಟ್ಟಿಯನ್ನ ಕೋರ್ಟ್ಗೆ ಸಲ್ಲಿಸಿದ SIT
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾರೆಂದು ಅಪಪ್ರಚಾರ ಪ್ರಕರಣದ ತನಿಖೆ ಕ್ಲೈಮ್ಯಾಕ್ಸ್ ತಲುಪಿದೆ. SIT ಬೆಳ್ತಂಗಡಿ ನ್ಯಾಯಾಲಯಕ್ಕೆ 3,932 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ. ಪ್ರಮುಖ ಆರೋಪಿ ಚಿನ್ನಯ್ಯ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಸೇರಿ ಹಲವರ ಹೇಳಿಕೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಂಪೂರ್ಣ ತನಿಖೆಗಾಗಿ SIT ಕಾಲಾವಕಾಶ ಕೇಳಿದೆ.
ಮಂಗಳೂರು, ನವೆಂಬರ್ 20: ಧರ್ಮಸ್ಥಳದ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಕೊನೆಗೂ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಆರು ತಿಂಗಳ ಹೈಡ್ರಾಮಾ, ನಾಲ್ಕು ತಿಂಗಳ ತನಿಖೆಗೆ ಸಂಬಂಧಿಸಿದಂತೆ ಗುರುವಾರ ತನಿಖಾಧಿಕಾರಿ ಜಿತೇಂದ್ರ ಕುಮಾರ್ ನೇತೃತ್ವದಲ್ಲಿ ಚಾರ್ಜ್ಶೀಟ್ ಹಾಗೂ ಸುಳ್ಳು ಸಾಕ್ಷ್ಯ ವರದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕೋರ್ಟ್ಗೆ ಸಲ್ಲಿಸಲಾಗಿದೆ. ಸದ್ಯ ಎಸ್ಐಟಿ ತನಿಖೆಯ ವರದಿ ಹಲವರಲ್ಲಿ ನಡುಕ ಹುಟ್ಟಿಸಿದ್ದು, ಪ್ರಕರಣದ ಮುಂದಿನ ಬೆಳವಣಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.
3,932 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ
ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದ ತಂಡ 7 ಫೈಲ್ಗಳುಳ್ಳ 3,932 ಪುಟಗಳ ಪ್ರಾಥಮಿಕ ಹಂತದ ದೋಷಾರೋಪ ಪಟ್ಟಿಯನ್ನ ಕೋರ್ಟ್ಗೆ ಸಲ್ಲಿಸಿದೆ. ಆರಂಭದಲ್ಲಿ ಚಿನ್ನಯ್ಯನ ಹೇಳಿಕೆ, ಮಹಜರು, 17 ಹೆಚ್ಚು ಜಾಗದಲ್ಲಿ ನಡೆದಿದ್ದ ಸಮಾಧಿ ಶೋಧ, ಆತನ ಸಂಪರ್ಕದಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸುಜಾತ ಭಟ್, ವಿಠಲ್ ಗೌಡ ಹೀಗೆ ಎಲ್ಲರ ಹೇಳಿಕೆಗಳನ್ನ SIT ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಪ್ರಕರಣ ಸಂಬಂಧ ಮಹೇಶ್ ಶೆಟ್ಟಿ ತಿಮರೋಡಿ ವಿಚಾರಣೆ ಸೇರಿದಂತೆ ಇನ್ನುಳಿದವರ ವಿಚಾರಣೆಗೆ ಎಸ್ಐಟಿ ನೋಟಿಸ್ ಕೊಟ್ಟಿದ್ದು, ಸದ್ಯ ವಿಚಾರಣೆಗೆ ಕೋರ್ಟ್ ತಡೆ ಆದೇಶವನ್ನು ನೀಡಿದೆ. ಈ ನಡುವೆಯೂ ಎಸ್ಐಟಿ ತಮ್ಮ ವರದಿಯನ್ನು ಬೆಳ್ತಂಗಡಿ ಕೋರ್ಟ್ಗೆ ನೀಡಿದೆ. ಕೆಲ ಆರೋಪಿಗಳ ವಿಚಾರಣೆ ಇನ್ನು ಬಾಕಿ ಇದೆ. ಜೊತೆಗೆ ಲ್ಯಾಬ್ ರಿಪೋರ್ಟ್ ಕೂಡ ಇನ್ನು ಬಂದಿಲ್ಲ. ಆದ್ದರಿಂದ ತನಿಖೆ ಮುಂದುವರೆಸಲು ಇನ್ನು ಕಾಲಾವಕಾಶ ಬೇಕು ಅಂತಾ ಎಸ್ಐಟಿ ನ್ಯಾಯಾಧೀಶರನ್ನ ಕೇಳಿದೆ. ಸಂಪೂರ್ಣ ತನಿಖೆ ಬಳಿಕ ಪೂರ್ಣ ಪ್ರಮಾಣದ ಚಾರ್ಜ್ ಶೀಟ್ ಸಲ್ಲಿಸುತ್ತೇವೆ ಅಂತಾ ಹೇಳಿದೆ.





