ಮೂರು ದಿನಗಳ ಕಾಲ ಕಾಡಿನಲ್ಲಿ ಒಬ್ಬಂಟಿಯಾಗಿ ಕಳೆದಿದ್ದ ಶರಣ್ಯ
ಕೊಡಗು, ಏ. 6: ಜಿಲ್ಲೆಯ ಅತಿ ಎತ್ತರದ ಬೆಟ್ಟವಾದ ತಡಿಯಾಂಡಮೋಳ್ನಲ್ಲಿ ಟ್ರೆಕ್ಕಿಂಗ್ಗೆ ತೆರಳಿ ಕಣ್ಮರೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ ಕೊನೆಗೂ ಪತ್ತೆಯಾಗಿದ್ದಾರೆ. ಏಪ್ರಿಲ್ 2ರಿಂದ ಕಾಣೆಯಾಗಿದ್ದ ಅವರನ್ನು ಹುಡುಕಲು ನಡೆದ ಭಾರೀ ಶೋಧ ಕಾರ್ಯಾಚರಣೆ ಯಶಸ್ವಿಯಾಗಿದೆ.
36 ವರ್ಷದ ಶರಣ್ಯ ಒಬ್ಬಂಟಿಯಾಗಿ ಚಾರಣಕ್ಕೆ ತೆರಳಿದ್ದು, ದಾರಿ ತಪ್ಪಿದ ಬಗ್ಗೆ ಮಧ್ಯಾಹ್ನ ಕುಟುಂಬಕ್ಕೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಸಂಪರ್ಕ ಕಡಿತವಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಹಾಗೂ ಅರಣ್ಯ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿದ್ದರು.ಶರಣ್ಯ ಪತ್ತೆಗೆ ಸುಮಾರು 40ಕ್ಕೂ ಹೆಚ್ಚು ಸಿಬ್ಬಂದಿ ಒಳಗೊಂಡ ಹೆಚ್ಚುವರಿ ತಂಡಗಳನ್ನು ನಿಯೋಜಿಸಲಾಗಿತ್ತು. ಡ್ರೋನ್ಗಳ ಸಹಾಯದಿಂದ ಮೂರು ದಿನಗಳ ಕಾಲ ಶೋಧ ನಡೆಸಲಾಗಿದ್ದು, ಒಟ್ಟು 9 ತಂಡಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಪೊಲೀಸರು, ನಕ್ಸಲ್ ನಿಗ್ರಹ ದಳ, ಶ್ವಾನದಳ ಹಾಗೂ ಅರಣ್ಯ ಸಿಬ್ಬಂದಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರು.ಕೊನೆಗೂ ಭಾನುವಾರ ಸಂಜೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಶರಣ್ಯ ಪತ್ತೆಯಾಗಿದ್ದು, ಮೂರು ದಿನಗಳ ಕಾಲ ಕಾಡಿನಲ್ಲಿ ಒಬ್ಬಂಟಿಯಾಗಿ ಕಳೆದಿದ್ದರು. ತಕ್ಷಣ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಅವರು ಸುರಕ್ಷಿತವಾಗಿರುವುದು ತಿಳಿದುಬಂದಿದೆ.
ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಹಾಗೂ ಅರಣ್ಯದ ಹಾದಿಗಳ ಬಗ್ಗೆ ಪರಿಣತಿ ಹೊಂದಿರುವ ಕುಡಿಯ ಜನಾಂಗದ ಯುವಕರು ಅರಣ್ಯದ ಆಳ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದ ವೇಳೆ ಶರಣ್ಯ ಪತ್ತೆಯಾಗಿದ್ದಾರೆ. ಅವರು ಆರೋಗ್ಯವಾಗಿದ್ದು, ಸ್ಥಳೀಯರು ಮತ್ತು ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.ಈ ನಡುವೆ, ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಮಲೆಕುಡಿಯ ಜನಾಂಗದ ದೈವ ಮೊರೆ ಹೋಗಲಾಗಿತ್ತು. “ಯುವತಿ ಸುರಕ್ಷಿತವಾಗಿದ್ದು ಶೀಘ್ರದಲ್ಲೇ ಪತ್ತೆಯಾಗುತ್ತಾಳೆ” ಎಂಬ ದೈವವಾಣಿ ನೀಡಲಾಗಿದ್ದು, ಅದರಂತೆ 24 ಗಂಟೆಯೊಳಗೆ ಶರಣ್ಯ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆಶ್ಚರ್ಯ ಮತ್ತು ಭಕ್ತಿಯನ್ನು ಹೆಚ್ಚಿಸಿದೆ.ಈ ಕಾರ್ಯಾಚರಣೆಗೆ ಸ್ಥಳೀಯ ಗ್ರಾಮಸ್ಥರೂ ಮಹತ್ವದ ಸಹಕಾರ ನೀಡಿದ್ದು, ನಾಲ್ಕು ದಿನಗಳ ನಿರಂತರ ಶ್ರಮಕ್ಕೆ ಫಲ ಸಿಕ್ಕಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಅಧಿಕಾರಿಗಳು ಶೋಧ ಕಾರ್ಯದಲ್ಲಿ ಭಾಗಿಯಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ ಈ ಬಗ್ಗೆ ಮಾಹಿತಿ ಹಂಚಿಕೊಂಡು, ರಾಜ್ಯ ಸರ್ಕಾರದ ಮಾರ್ಗದರ್ಶನದಲ್ಲಿ ಪೊಲೀಸರು, ಅರಣ್ಯ ಇಲಾಖೆ, ನಕ್ಸಲ್ ನಿಗ್ರಹ ದಳ ಹಾಗೂ ಸ್ಥಳೀಯರ ಸಹಕಾರದಿಂದ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.





