ಸುಳ್ಯ: ಸುಳ್ಯ ತಾಲೂಕಿನಲ್ಲಿ ಹೀಗೊಂದು ರಸ್ತೆ ಕಾಮಗಾರಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವಿಚಿತ್ರವೆಂದರೆ ಇದು ನಗರ ಪಂಚಾಯತ್ ಮಾಡಿದ ಕಾಮಗಾರಿ ಅಲ್ಲ. ಬದಲಾಗಿ ಸ್ಥಳೀಯ ವಸತಿ ಬಡಾವಣೆ ನಿರ್ಮಿಸುವ ಸಂಸ್ಥೆಯು ಈ ಕಾಮಗಾರಿ ನಡೆಸಿದ್ದು, ಈ ಬಗ್ಗೆ ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ ಪ್ರತಿಕ್ರಿಯಿಸಿದ್ದಾರೆ.
ಸುಳ್ಯ ನಗರ ವ್ಯಾಪ್ತಿಯ ಸರಕಾರಿ ಆಸ್ಪತ್ರೆ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣವಾದ ರಸ್ತೆಯಲ್ಲಿ ವಿದ್ಯುತ್ ಕಂಬವನ್ನು ತೆರವುಗೊಳಿಸದೆ ಕಾಮಗಾರಿ ನಡೆಸಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ರಸ್ತೆಯನ್ನು ಖಾಸಗಿ ವಸತಿ ಬಡಾವಣೆಯನ್ನು ನಿರ್ಮಿಸುವ ಸಂಸ್ಥೆಯು ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳಿಗೆ ಶೀಘ್ರವಾಗಿ ಕಂಬ ತೆರವುಗೊಳಿಸಿ ರಸ್ತೆಸಂಚಾರಕ್ಕೆ ಮುಕ್ತವಾಗುವಂತೆ ಅನುವುಮಾಡಿಕೊಡಬೇಕು ತಪ್ಪಿದ್ದಲ್ಲಿ ಸಂಸ್ಥೆಯ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದಿದ್ದಾರೆ.
ಆದರೆ ಪೂರ್ವಮಾಹಿತಿ ನೀಡದೇ ಕಾಮಗಾರಿ ನಡೆದಾಗ ಅಧಿಕಾರಿಗಳು ಏನು ಮಾಡುತ್ತಿದ್ದರು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.



