ಬ್ರೆಸಿಲಿಯಾ: ಬಂಗೀ ಜಂಪಿಂಗ್ ವೇಳೆ ಸಿಬ್ಬಂದಿ ಸೇಫ್ಟಿ ರೋಪ್ ಕಟ್ಟುವುದನ್ನು ಮರೆತ ಪರಿಣಾಮ ಯುವತಿಯೊಬ್ಬಳು 130 ಅಡಿ ಎತ್ತರದಿಂದ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಬ್ರೆಜಿಲ್ನ ಸಾವೊ ಪಾಲೊ ರಾಜ್ಯದ ಲಿಮೈರಾ ನಗರದಲ್ಲಿ ನಡೆದಿದೆ.
ಮಾರಿಯಾ ಎಡ್ವರ್ಡಾ ರೊಡ್ರಿಗಸ್ ಡಿ ಫ್ರೀಟಾಸ್(21) ಸಾವನ್ನಪ್ಪಿದ ಯುವತಿ.ಯುವತಿ ಮೃತಪಟ್ಟ ಬೆನ್ನಲ್ಲೇ ಬ್ರೆಜಿಲ್ ಮಿಲಿಟರಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಘಟನಾ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆಯೋಜಕರು ಮತ್ತು ಜವಾಬ್ದಾರರ ತಂಡವನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಬಂಗೀ ಜಂಪ್ ವೇಳೆ ನಿರ್ಲಕ್ಷ್ಯ ತೋರಿದ ಆರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.ಯುವತಿಯು ಖಾಸಗಿ ಕಂಪನಿಯೊಂದು ಸಾವೊ ಪಾಲೊ ರಾಜ್ಯದ ಸ್ಕೆಲಿಟನ್ ಸೇತುವೆ ಮೇಲೆ ಆಯೋಜಿಸಿದ ಬಂಗೀ ಜಂಪ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಳು. ಯುವತಿ ಎತ್ತರದಿಂದ ಬೀಳುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಸಿಬ್ಬಂದಿ ಅವಳನ್ನು ಸೇತುವೆಯ ಅಂಚಿಗೆ ಕರೆದೊಯ್ದು, ಅವಳನ್ನು ಕೈ ಬಿಡುವ ದೃಶ್ಯ ಕಾಣಬಹುದಾಗಿದೆ. ಜೊತೆಗೆ ಯುವತಿ ಸೇತುವೆಯಿಂದ ಬೀಳುತ್ತಿದ್ದಂತೆ, ಹಗ್ಗ, ಹಗ್ಗ ಎಂದು ಕೂಗಿರುವುದು ದಾಖಲಾಗಿದೆ.ಇನ್ನು ವಿಡಿಯೋದಲ್ಲಿ ಸೇಫ್ಟಿ ರೋಪ್ ಕಟ್ಟಿದ್ದಾರೆಯೇ ಅಥವಾ ಕಟ್ಟಿಲ್ಲವೇ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಆದರೆ ಸೇಫ್ಟಿ ರೋಪ್ನ್ನು ಅವಳ ದೇಹಕ್ಕೆ ಕಟ್ಟಿರಲಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.ಕಂದಕಕ್ಕೆ ಇಳಿದ ರಕ್ಷಣ ತಂಡ ಯುವತಿಯ ಮೃತದೇಹವನ್ನು ಮೇಲೆತ್ತಿದೆ. ನಂತರ ಆಕೆಯ ಮೃತದೇಹವನ್ನು ಪರೀಕ್ಷೆಗಾಗಿ ಕಾನೂನು ವೈದ್ಯಕೀಯ ಸಂಸ್ಥೆಗೆ ರವಾನಿಸಲಾಗಿದೆ.



