ಬೆಳ್ತಂಗಡಿ: ಕಳಿಯ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿ ಅಸಹಜವಾಗಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐ.ಜಿ.ಪಿ ಯವರು ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದರು. ಮೃತ ಬಾಲಕನ ಮನೆಯವರೊಂದಿಗೂ ಮಾತುಕತೆ ನಡೆಸಿದರು. ಎಸ್ಪಿ ಡಾ.ಅರುಣ್ ಕೆ, ಡಿವೈಎಸ್ಪಿ ರೋಹಿನಿ ಸಿಕೆ , ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ, ಎಸ್ಐ ಆನಂದ್. ಎಂ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು.
ಆರಂಭದಲ್ಲಿ ಪ್ರಕರಣದ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದರೂ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಕೊಲೆ ಪ್ರಕರಣ ಎಂದು ಬಹುತೇಕ ಕಂಡು ಬರುತ್ತಿದ್ದು ಈ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳು ತೀವ್ರ ತನಿಖೆ ಆರಂಭಿಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.
ಧನು ಪೂಜೆಗಾಗಿ ಮನೆಯಿಂದ ಹೊರಟಿದ್ದ ಒಂಬತ್ತನೇ ತರಗತಿಯ ವಿದ್ಯಾರ್ಥಿ ಸುಮಂತ್ (೧೬) ಬುಧವಾರ ಬೆಳಿಗ್ಗೆ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಬೋಳ್ಯದ ಬರಮೇಲು ಎಂಬಲ್ಲಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದನು.
ಪ್ರತಿದಿನ ತನ್ನ ಸ್ನೇಹಿತರೊಂದಿಗೆ ಸುಮಂತ್ ಧನು ಪೂಜೆಗೆ ಹೋಗುತ್ತಿದ್ದನು. ಬುಧವಾರ ಬೆಳಿಗ್ಗೆ ಆತ ಮನೆಗೂ ಮರಳದೆ, ಇತ್ತ ಸ್ನೇಹಿತರೊಂದಿಗೂ ತೆರಳದೆ ಇದ್ದಾಗ ಆತಂಕಗೊಂಡ ಸ್ನೇಹಿತರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಆತಗಾಗಿ ಹುಡುಕಾಟ ಆರಂಭಿಸಿದ್ದು, ಕೊನೆಯದಾಗಿ ಬಾಲಕ ತೆರಳಿದ ಪ್ರದೇಶದ ತೋಟದ ಕೆರೆಯ ಬದಿಯಲ್ಲಿ ರಕ್ತದ ಕಲೆಗಳು ಕಂಡುಬಂದಿತ್ತು. ಈ ಪ್ರದೇಶದಲ್ಲಿ ಚಿರತೆಗಳ ಓಡಾಟ ಹೆಚ್ಚಾಗಿರುವುದರಿಂದ, ಬಾಲಕನ ನಾಪತ್ತೆಯ ಹಿಂದೆ ಚಿರತೆಯ ದಾಳಿಯಿರಬಹುದು ಎಂಬ ಸಂಶಯಕ್ಕೆ ಕಾರಣವಾಗಿತ್ತು.
ಮಾಹಿತಿ ತಿಳಿಯುತ್ತಿದ್ದಂತೆಯೇ ಬೆಳ್ತಂಗಡಿ ಪೊಲೀಸರು, ಬೆಳ್ತಂಗಡಿ ವಲಯದ ಅರಣ್ಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಜಂಟಿಯಾಗಿ ನಡೆಸಿದ ಶೋಧದ ನಂತರ, ತೋಟದ ಕೆರೆಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿನ ಖರ ಕಾರಣ ತಿಳಿಯಲು ತಖೆ ಕೈಗೊಂಡಿದ್ದಾರೆ.

ಶಾಸಕ ಹರೀಶ್ ಪೂಂಜ ಭೇಟಿ, ಉನ್ನತ ತನಿಖೆಗೆ ಆಗ್ರಹ
ಘಟನಾ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸ್ಥಳೀಯರು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಸಾವಿನ ಬಗ್ಗೆ ಸಂಶಯ ವ್ಯಕ್ತವಾಗುತ್ತಿದ್ದು, ಸೂಕ್ತ ರೀತಿಯ ತನಿಖೆ ನಡೆಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.





