ನವದೆಹಲಿ, ಡಿ. 4: ಡಾಲರ್ ಎದುರು ರುಪಾಯಿ ಕರೆನ್ಸಿ ಮೌಲ್ಯ ಗುರುವಾರ 90.56ರವರೆಗೆ ಕುಸಿದಿತ್ತು. ಪ್ರತೀ ಡಾಲರ್ಗೆ ರುಪಾಯಿ ಮೌಲ್ಯ 90ರ ಗಡಿ ದಾಟಿದ್ದು ಇದೇ ಮೊದಲು. ದಿನದಿಂದ ದಿನಕ್ಕೆ ರುಪಾಯಿ ಕರೆನ್ಸಿ ಮೌಲ್ಯ ಕುಂದುತ್ತಲೇ ಇದೆ. ಕೆಲ ವರದಿಗಳ ಪ್ರಕಾರ ಈ ವರ್ಷ ಏಷ್ಯಾದ ಕರೆನ್ಸಿಗಳ ಪೈಕಿ ರುಪಾಯಿಯದ್ದೇ ಅತ್ಯಂತ ಕಳಪೆ ಸಾಧನೆ ಎನ್ನಲಾಗಿದೆ. ಎಸ್ಬಿಐ ರಿಸರ್ಚ್ನ ವರದಿಯೊಂದರ ಪ್ರಕಾರ, ರುಪಾಯಿ ಮೌಲ್ಯ ಕಡಿಮೆ ಆಗುತ್ತಿದೆಯಾದರೂ, ಅದು ದುರ್ಬಲಗೊಂಡಿಲ್ಲ ಎಂದಿದೆ.
‘ರುಪಾಯಿ ಇಳಿಯುತ್ತಿದೆ ಎಂದರೆ ಅದು ದುರ್ಬಲ ಕರೆನ್ಸಿ ಎಂದೇನಲ್ಲ. ಆಂತರಿಕ ಶಕ್ತಿಯು ಬಾಹ್ಯ ಶಕ್ತಿಗಳನ್ನು ಪ್ರತಿರೋಧಿಸಬೇಕು. ರುಪಾಯಿ ದರ ಕುಸಿತದಿಂದ ಮಾರುಕಟ್ಟೆಯ ಭಾವನೆಗಳಿಗೆ ಘಾಸಿ ಆಗಬಹುದು. ಆದರೆ, ಕರೆನ್ಸಿ ನಿರ್ವಹಣೆಯು ಸೆಂಟ್ರಲ್ ಬ್ಯಾಂಕ್ನ (RBI) ಜವಾಬ್ದಾರಿಯಲ್ಲ ಎಂಬುದೂ ಹೌದು,’ ಎಂದು ಎಸ್ಬಿಐ ರಿಸರ್ಚ್ ತನ್ನ ವರದಿಯಲ್ಲಿ ಹೇಳಿದೆ.





