ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಕೈಕ ಪ್ರಾಣಿಗಳ ಸಂಗ್ರಾಲಯ ಆಗಿದ್ದ ಪಿಲಿಕುಳ ಪ್ರಾಣಿ ಸಂಗ್ರಾಲಯ ಇನ್ನೂ ನೆನಪು ಮಾತ್ರ. ಮಕ್ಕಳಿಗೂ ಕುಟುಂಬಗಳಿಗೂ ಜನಪ್ರಿಯವಾದ ಪ್ರವಾಸಿ ತಾಣವಾದ ಪಿಲಿಕುಳ ನಿಸರ್ಗಧಾಮ, ಆಡಳಿತದ ನಿರ್ಲಕ್ಷ್ಯ ಹಾಗೂ ಜವಾಬ್ದಾರಿಹೀನತೆಯ ಆರೋಪಗಳ ಹಿನ್ನೆಲೆಯಲ್ಲಿ ಹೈಕೋರ್ಟ್ನ ತೀವ್ರ ಟೀಕೆಗೆ ಗುರಿಯಾಗಿದೆ. ಕರಾವಳಿಯ ಪ್ರಸಿದ್ಧ ZOO ನಲ್ಲಿ ನಡೆದಿರುವ ದುರುಪಯೋಗವನ್ನು ಕಂಡು ಆಘಾತಗೊಂಡ ಹೈಕೋರ್ಟ್ ನ್ಯಾಯಮೂರ್ತಿಗಳು, ಜೂ ಅನ್ನು ತಕ್ಷಣ ಮುಚ್ಚುವಂತೆ ಆದೇಶಿಸಿದ್ದಾರೆ.
ವನ್ಯಜೀವಿ ಸಂರಕ್ಷಣಾವಾದಿ ಭುವನ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ, ನ್ಯಾಯಪೀಠವು ಪ್ರಾಣಿಗಳ ಫೋಟೋಗಳನ್ನು ಪರಿಶೀಲಿಸಿ ಗಂಭೀರ ಕಳವಳ ವ್ಯಕ್ತಪಡಿಸಿತು. ಜಂಗಾದ ಪಂಜರಗಳು, ಅಸ್ವಚ್ಛ ಪರಿಸರ, ಹಾಗೂ ಪ್ರಾಣಿಗಳಿಗೆ ಅಗತ್ಯವಾದ ಸುರಕ್ಷತೆ ಮತ್ತು ಆರೈಕೆಯ ಕೊರತೆ ಬಗ್ಗೆ ನ್ಯಾಯಾಲಯ ಕಠಿಣ ನಿರ್ದೇಶನಗಳನ್ನು ನೀಡಿದೆ.
ಪಿಲಿಕುಳ ಪ್ರಾಣಿ ಸಂಗ್ರಾಲಯ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದೆಯೇ ಎಂಬುದರ ಮೇಲೂ ನ್ಯಾಯಾಲಯ ಸಂಶಯ ವ್ಯಕ್ತಪಡಿಸಿದೆ. ಏಕೆಂದರೆ ಅದರ ಪರವಾನಗಿ ಡಿಸೆಂಬರ್ 2025ರಲ್ಲಿ ಅವಧಿ ಮುಗಿದಿದೆ ಎಂದು ವರದಿಯಾಗಿದೆ. ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊರತೆಯಿಂದ ಪ್ರಾಣಿಗಳು ದುರ್ಬಲಗೊಳ್ಳುತ್ತಿದ್ದು. ಕಲುಷಿತ ನೀರನ್ನು ಸೇವಿಸುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದೆ ಎಂದು ಗಮನಿಸಲಾಗಿದೆ. ಕೇಂದ್ರ ಜೂ ಪ್ರಾಧಿಕಾರವು ಕಾರಣ ಕೇಳುವ ನೋಟಿಸ್ ನೀಡಿದ್ದರೂ, ಜೂ ಆಡಳಿತ ಅದನ್ನು ನಿರ್ಲಕ್ಷಿಸಿದೆ ಎನ್ನಲಾಗಿದೆ. ಕರಾವಳಿಯ ಪ್ರಮುಖ ಪ್ರವಾಸಿ ಆಕರ್ಷಣೆಯೊಂದರ ದುಸ್ಥಿತಿ ಪ್ರಾಣಿಪ್ರೇಮಿಗಳಲ್ಲಿ ತೀವ್ರ ಕಳವಳ ಉಂಟುಮಾಡಿದೆ.






