ಶಿಲಾಮಯ ಕಟ್ಟೆಗಳ ನಿರ್ಮಾಣ, ರೂ. 15 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ
ವೇಣೂರು: ವೇಣೂರು ಹೋಬಳಿಯ ಪಡ್ಡಂದಡ್ಕ ಕಟ್ಟೆ ಎಂಬಲ್ಲಿ ಭವ್ಯ ಇತಿಹಾಸ ಹೊಂದಿರುವ ದೊಂಪದಬಲಿ ಗಡುಸ್ಥಳದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದೆ.
ಅಜಿಲಸೀಮೆ ದೈವರಾಧನೆಯಲ್ಲಿ ರೀತಿ ರಿವಾಜು, ಕಟ್ಟುಕಟ್ಟಲೆಗಳು ವಿಶೇಷ ಸ್ಥಾನವನ್ನು ಹೊಂದಿದೆ. ಪಡ್ಡಂದಡ್ಕದ ಕಟ್ಟೆ ಎಂಬಲ್ಲಿರುವ ಈ ಗಡುಸ್ಥಳವು ಅಜಿಲಸೀಮೆಯ ಪೆರಿಂಜೆ ಮಾಗಣೆಗೆ ಒಳಪಟ್ಟಿದ್ದು, ಹೊಸಂಗಡಿ, ಕರಿಮಣೇಲು, ಪಡ್ಯೋಡಿ, ಬಡಕೋಡಿ ಹಾಗೂ ಮೂಡುಕೋಡಿಯ ಐದು ಗ್ರಾಮಗಳ ವ್ಯಾಪ್ತಿಗೆ ಬರುತ್ತದೆ. ಅನಾದಿ ಕಾಲದಿಂದಲೂ ಇಲ್ಲಿ ಪೆರಾರ್ದೆ ತಿಂಗಳಲ್ಲಿ ಐದು ಗ್ರಾಮಗಳ ಗುತ್ತು-ಬರ್ಕೆಯ ಗ್ರಾಮಸ್ಥರು ಸೇರಿಕೊಂಡು ದೊಂಪದಬಲಿ ನಡೆಸುತ್ತಿದ್ದರು ಅನ್ನುವ ವಾಡಿಕೆ ಇದೆ.


ಬಹುಪುರಾತನ ಕಾಲದಿಂದ ಶ್ರೀ ದೈವ, ಕೊಡಮಣಿತ್ತಾಯ ಹಾಗೂ ಕಲ್ಕುಡ-ಕಲ್ಲುರ್ಟಿ, ಕಾಳಮ್ಮ ದೈವಗಳಿಗೆ ಪಡ್ಯೋಡಿ, ಕೊಣಿಲ, ಗುತ್ತು, ಪುಚ್ಚರ್ಲೆಕ್ಕಿ, ಕೈದೊಡ್ಡು ಮನೆತನಗಳಿಂದ ಭಂಡಾರ ಬಂದು ಈ ಗಡುಸ್ಥಳದಲ್ಲಿ ಬಹಳ ವಿಜ್ರಂಭನೆಯಿಂದ ಕಟ್ಟುಕಟ್ಟಲೆಯಂತೆ ದೊಂಪದಬಲಿ ನೇಮೋತ್ಸವ ನಡೆಯುತ್ತಿದ್ದ ಅತ್ಯಂತ ಕಲೆ ಕಾರ್ಣಿಕದ ಗಡುಸ್ಥಳವಾಗಿದೆ.
ತೀರಾ ಅಜೀರ್ಣಾವಸ್ಥೆಗೆ ತಲುಪಿದ್ದ ಗಡುಸ್ಥಳವನ್ನು ಸ್ಥಳ ಪ್ರಶ್ನೆ ಚಿಂತನೆ ನಡೆಸಿ ಐದೂ ಗ್ರಾಮಗಳ ಪ್ರಮುಖರು, ಗ್ರಾಮಸ್ಥರು ಸೇರಿ ಜೀರ್ಣೋದ್ದಾರ ಸಮಿತಿ ರಚಿಸಲಾಗಿದೆ. ಶ್ರೀ ದೈವ, ಶ್ರೀ ಕೊಡಮಣಿತ್ತಾಯ ಹಾಗೂ ಪರಿವಾರ ಸಾಧ್ಯವನ್ನು ವಾಸ್ತುಪ್ರಕಾರವಾಗಿ ಜೀಣೋದ್ದಾರಗೊಳಿಸಿ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ದೊಂಪದಬಲಿ ನೇಮೋತ್ಸವ ನಡೆಸಲು ಸಮಿತಿ ರ್ಧರಿಸಿದೆ.

ರೂ. 15 ಲಕ್ಷದಲ್ಲಿ ಜೀರ್ಣೋದ್ಧಾರ
ಪಡ್ಡಂದಡ್ಕ ಕಟ್ಟೆ ಗಡುಸ್ಥಳದಲ್ಲಿ ವಾಸ್ತುಶಿಲ್ಪ ಪ್ರಕಾರ ಶ್ರೀ ದೈವ ಕೊಡಮಣಿತ್ತಾಯ, ಶ್ರೀ ಕಲ್ಕುಡ ಕಲ್ಲುರ್ಟಿ, ಕಾಳಮ್ಮ ದೈವಗಳ ಶಿಲೆ ಕಲ್ಲಿನ ಕಟ್ಟೆಗಳ ರ್ಮಾಣ ಕಾರ್ಯನಡೆಯುತ್ತಿದೆ. ಆವರಣಗೋಡೆಯ ಕೆಲಸ ಕಾರ್ಯಗಳು ಪ್ರಗತಿಯಲ್ಲಿದೆ. ದೊಂಪದಬಲಿ ಕಟ್ಟೆಗಳಿಗೆ ಶಿಲಾಕಂಬ ರ್ಮಿಸಲಾಗುತ್ತಿದೆ. ಕಂಪೌಂಡ್ ಒಳಗಡೆ ಇಂಟರ್ಲಾಕ್ ಅಳವಡಿಸುವ ಕಾರ್ಯ ಆಗಬೇಕಿದೆ.

ರಾಜ್ಯಗುತ್ತು, ಮಾಗಣೆಗುತ್ತು, ಗ್ರಾಮಗುತ್ತುಗಳು ಹಾಗೂ ಐದು ಗ್ರಾಮಗಳ ಬರ್ಕೆಯವರು ಹಾಗೂ ಗ್ರಾಮಸ್ಥರು ಜೊತೆಗೂಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಜಿನರಾಜ್ ಜೈನ್ ಅವರ ಮುಂದಾಳತ್ವದಲ್ಲಿ ಜೀರ್ಣೋದ್ಧಾರದ ಕೆಲಸಕಾರ್ಯಗಳು ಪ್ರಗತಿಯಲ್ಲಿದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಅಂದಾಜು ರೂ.15 ಲಕ್ಷ ಬೇಕಾಗಿದ್ದು, ತನು-ಮನ-ಧನಗಳಿಂದ ಸಹಕಾರ ನೀಡಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗುವಂತೆ ವಿನಂತಿಸಲಾಗಿದೆ.





