ಸಂಸ್ಥಾಪಕರ ಗಟ್ಟಿಯಾದ ಬುನಾದಿ ಸಂಸ್ಥೆಯ ಸಾಧನೆಗೆ ಪ್ರೇರಣೆ: ಸಂಚಾಲಕ ಅಶ್ವಿತ್ ಕುಲಾಲ್
ವೇಣೂರು: ನಿಟ್ಟಡೆ ಕುಂಭಶ್ರೀ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಶಿಕ್ಷಣ ಸಂಸ್ಥೆಯ ಸಂಚಾಲಕ ಅಶ್ವಿತ್ ಕುಲಾಲ್ ಮಾತನಾಡಿ, ಸಂಸ್ಥಾಪಕರಾದ ಗಿರೀಶ್ ಕೆ.ಎಚ್. ಅವರು ಹಾಕಿದ ಗಟ್ಟಿಯಾದ ಬುನಾದಿ ಇಂದು ಶಾಲೆ ಇಷ್ಟು ಎತ್ತರ ಬೆಳೆದಿದೆ. ಪುತ್ರನಾಗಿ ಹೆಮ್ಮೆಯ ತಂದೆ, ಶಿಷ್ಯನಾಗಿ ಎತ್ತರ ಸ್ಥಾನದಲ್ಲಿ ಗುರು, ತಿದ್ದಿ ದಾರಿತೋರಿಸುವ ಮಾರ್ಗದರ್ಶನ ನೀಡುವ ಗಿರೀಶ್ ಕೆ.ಚ್. ಅವರ ಅವಿರತ ಶ್ರಮ ಮರೆಯಲಾಗದು. ಎಸ್ಎಸ್ಎಲ್ಸಿ ೧೨ ಬಾರಿ ಹಾಗೂ ಪಿಯುಸಿಯಲ್ಲಿ ಸತತ ೪ವರ್ಷ ಶೇ. ೧೦೦ ಫಲಿತಾಂಶ ತಂದ ವಿದ್ಯಾಸಂಸ್ಥೆ ಇದು ಎಂದರು.
ಸಂಸ್ಥಾಪಕ ಗಿರೀಶ್ ಕೆ.ಎಚ್. ಅವರು ಅನಿಸಿಕೆ ವ್ಯಕ್ತಪಡಿಸಿ, ಗುಡ್ಡದಂತಿದ್ದ ಈ ಪ್ರದೇಶ ಪುಟ್ಟ ಮಕ್ಕಳ ನಿರಂತರ ಪಾದಸ್ಪರ್ಶದಿಂದ ಇದು ಬೆಳಗಿದೆ. ಸಂಸ್ಥೆಯು ರಾಜ್ಯ, ರಾಷ್ಟಮಮಟ್ಡದ ಸಾಧನೆಗೆ ಇಲ್ಲಿ ವಿದ್ಯೆ ನೀಡಿದ ಶಿಕ್ಷಕರು ಹಾಗೂ ವಿದ್ಯೆ ಪಡೆದ ವಿದ್ಯಾರ್ಥಿಗಳೇ ಕಾರಣ ಎಂದರು. ಅಶ್ವಿತ್ ಕುಲಾಲ್, ಚಂದ್ರಶೇಖರ್ ಅನಿಸಿಕೆ ವ್ಯಕ್ತಪಡಿಸಿದರು.
ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್.ಎನ್. ಅವರು ರಚಿಸಿದ ಹಾಡಿಗೆ ಶಿಕ್ಷಕ ವೃಂದ ಧ್ವನಿಯಾದರು.
ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಚಂದ್ರಶೇಖರ್, ಕುಂಭ ಶ್ರೀ ವೈಭವ ಸಮಿತಿಯ ಅಧ್ಯಕ್ಷರಾದ ಅಶ್ವಿತ್ ಕುಲಾಲ್ ಅನಿಸಿಕೆ ವ್ಯಕ್ತಪಡಿಸಿದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರ ಮನೋಜ್, ಶಾಲಾ ಶೈಕ್ಷಣಿಕ ಸಲಹೆಗಾರ ಶ್ರೀಮತಿ ಉಷಾ ಹಾಗೂ ಎಲ್ಲಾ ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕರಾದ ಅಭಿಲಾಶ್ ಮತ್ತು ಪ್ರೌಢಶಾಲಾ ವಿಭಾಗದ ಶಿಕ್ಷಕಿ ಶ್ರೀಮತಿ ಅಕ್ಷತಾ ಇವರು ನಿರೂಪಿಸಿ, ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶುಭ ನಿತೇಶ್ ವಂದಿಸಿದರು.





