ಕುಕ್ಕುಂದೂರಿನ ಕುಂಬಾರ, ವಿಶ್ವ ಸಮುದಾಯದ ಕುಟುಂಬಸ್ಥರಿಂದ ಆರೋಪ; ಸ್ಥಳೀಯಾಡಳಿತ ಮೌನದ ವಿರುದ್ಧ ವ್ಯಾಪಕ ಆಕ್ರೋಶ
ಕಾರ್ಕಳ: ಇಲ್ಲಿಯ ಕುಕ್ಕುಂದೂರು ಪರಿಸರದ ಎರಡು ಬಡ ಕುಟುಂಬಗಳಿಗೆ ಸ್ಥಳೀಯ ಜಮೀನುದಾರರೊಬ್ಬರು ಹಕ್ಕುಪತ್ರ ಸಿಗದಂತೆ ರಾಜಕೀಯ ಪ್ರಭಾವ ಬಳಸಿ ಅಡ್ಡಿ ಪಡಿಸುತ್ತಿರುವ ಆರೋಪ ಕೇಳಿ ಬಂದಿದೆ.
ಕಾರ್ಕಳದಲ್ಲಿ ಈ ಕುಟುಂಬ ಇತ್ತೀಚಿಗೆ ಮಾಧ್ಯಮಗೋಷ್ಠಿ ನಡೆಸಿ ತಮ್ಮ ಅಳಲನ್ನು ತೋಡಿ ಕೊಂಡಿದ್ದಾರೆ. ಒಂದು ಕುಟುಂಬ ಕುಲಾಲ ಸಮುದಾಯದ ಗುಲಾಬಿ ಮೂಲ್ಯರದ್ದು ಹಾಗೂ ಅದರ ಜೊತೆಗೆ ವಿಶ್ವಕರ್ಮ ಸಮುದಾಯದ ಜಯಂತಿ ಆಚಾರ್ಯರಿಗೆ ಅನ್ಯಾಯ ಆಗಿರುವ ಬಗ್ಗೆ ಆರೋಪಿಸಲಾಗಿದೆ.
ಈ ಕುಟುಂಬಗಳಿಗೆ ಗೂಂಡಾಗಳ ಮೂಲಕ ಬೆದರಿಕೆ ಹಾಕುತ್ತಿರುವುದಲ್ಲದೆ ಕೃಷಿಗಳನ್ನು ನಾಶಪಡಿಸಿ ವಿನಃಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಮನೆಮಂದಿ ಆರೋಪಿಸಿದ್ದಾರೆ.
ಮಳೆಗಾಲದಲ್ಲಿ ಮನೆಯ ಸುತ್ತ ದೊಡ್ಡ ಗುಂಡಿ ತೆಗೆದು ಅದರಲ್ಲಿ ನೀರು ನಿಲ್ಲುವ ಹಾಗೆ ಮಾಡಿ ಮನೆಯನ್ನು ಕೆಡವಿ ಹಾಕುವ ಕಾರ್ಯವನ್ನು ಕೂಡಾ ಮಾಡಲಾಗಿತ್ತು.ಆ ಸಂದರ್ಭದಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆ ಗುಂಡಿ ಮುಚ್ಚಿಸಿದ್ದರು. ಅಲ್ಲದೆ ಪ್ರಕರಣ ಸಂಬಂಧ ಪೊಲೀಸರಿಗೂ ದೂರು ನೀಡಲಾಗಿತ್ತು. ಸ್ವಲ್ಪ ಸಮಯ ಸುಮ್ಮನಿದ್ದ ಈ ಜಮೀನುದಾರ ಇದೀಗ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದಾನೆ, ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ಕುಟುಂಬ ತನ್ನ ಅಳಲನ್ನು ತೋಡಿಕೊಂಡಿದೆ.
ಸ್ಥಳೀಯಾಡಳಿತ ಹಾಗೂ ಪೊಲೀಸರು ಈ ಬಡ ಕುಟುಂಬಕ್ಕೆ ರಕ್ಷಣೆ ನೀಡಿ ಆಗುತ್ತಿರುವ ಅನ್ಯಾಯವನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿದೆ.





