ಮಂಗಳೂರು, ಮೇ 20: ಹಿಜಾಬ್ ವಿವಾದ ರಾಜ್ಯರಾಜಕಾರಣ ಮಾತ್ರವಲ್ಲ ಇಡೀ ವಿಶ್ವವೇ ಒಮ್ಮೆ ರಾಜ್ಯದತ್ತ ತಿರುಗಿ ನೋಡುವಂತೆ ಮಾಡಿದ ವಿವಾದ. ಇದೀಗ ಮತ್ತೆ ಹಿಜಾಬ್ಗೆ ಅವಕಾಶ ಕೊಟ್ಟಿರುವುದು ಸಾಕಷ್ಟು ಜಟಾಪಟಿಗೆ ಕಾರಣವಾಗಿದೆ. ಇದಕ್ಕೆ ಹಿಂದೂ ಸಂಘಟನೆಗಳು ಕಿಡಿಕಾರಿದ್ದು, ಕಾಲೇಜು ಆರಂಭವಾಗುತ್ತಿದ್ದಂತೆ ಕೇಸರಿ ಶಾಲು ಧರಿಸಿ ಬರುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತೇವೆ ಅಂತಾ ಘೋಷಣೆ ಮಾಡಿದೆ.
ರಾಜ್ಯ ಸರ್ಕಾರ ಶಾಲಾ-ಕಾಲೇಜ್ಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದ್ದಲ್ಲದೇ, ಕೇಸರಿ ಶಾಲು ಧರಿಸುವಂತಿಲ್ಲ ಎಂಬ ಆದೇಶ ನೀಡಿತ್ತು. ಸದ್ಯ ಇದೀಗ ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಇದರ ಎಫೆಕ್ಟ್ ಎಲ್ಲೂ ಆಗಿಲ್ಲ. ಇನ್ನೇನು ಕೆಲ ವಾರಗಳಲ್ಲಿ ಶಾಲಾ-ಕಾಲೇಜುಗಳು ರಿಓಪನ್ ಆಗುತ್ತಿವೆ. ಅಂದಿನಂತೆ ಈ ವರ್ಷ ಕೂಡ ಹಿಜಾಬ್ ವರ್ಸಸ್ ಕೇಸರಿ ಶಾಲು ದಂಗಲ್ ಉಂಟಾಗುವ ಲಕ್ಷಣಗಳು ಕಾಣಿಸುತ್ತಿದೆ.
ಇನ್ನು ಈ ಬಗ್ಗೆ ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಸುದ್ದಿಗೋಷ್ಠಿಯಲ್ಲಿ ಧರ್ಮ ದಂಗಲ್ನ ಎಚ್ಚರಿಕೆ ನೀಡಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ವಿರುದ್ಧ ಕೇಸರಿ ಶಾಲು ಹಾಕುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವುದಾಗಿ ಹೇಳಿದೆ. ಅಲ್ಲದೆ ವಿದ್ಯಾರ್ಥಿಗಳ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸಂಪೂರ್ಣ ಸಹಕಾರ ನೀಡಿ ಬೀದಿಗೆ ಇಳಿದು ಹೋರಾಡಲು ಸಜ್ಜಾಗಿದೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ಆದರೆ ರಾಜ್ಯ ಸರ್ಕಾರ ನೇರ ಹೊಣೆ ಎಂದ ಶರಣ್ ಪಂಪ್ ವೆಲ್
ಇನ್ನು ಕಾನೂನು ಸುವ್ಯವಸ್ಥೆಗೆ ಧಕ್ಕೆ ಆದರೆ ಅದಕ್ಕೆ ನೇರ ಹೊಣೆ ರಾಜ್ಯ ಸರ್ಕಾರ. ಈ ವಿವಾದ ತಣ್ಣಗಾಗಿತ್ತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶಗಳು ಬರುತ್ತಿವೆ. ಆದರೆ ಇಂತಹ ಆದೇಶದಿಂದ ತಣ್ಣಗಿರುವ ಕಡೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆದರೆ ಅದಕ್ಕೆ ಸರ್ಕಾರ ಹೊಣೆ ಎಂದು ವಿಹೆಚ್ಪಿ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಸದ್ಯ ಕರಾವಳಿ ಶಾಂತವಾಗಿದೆ. ಇನ್ನು ಇಂತಹ ಧರ್ಮ ದಂಗಲ್ಗಳು ನಡೆದರೆ ಮತ್ತೆ ಸಾಮರಸ್ಯಕ್ಕೆ ಧಕ್ಕೆ ಆಗುವ ಸಾಧ್ಯತೆಗಳಿವೆ. ತಕ್ಷಣ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸಬೇಕಾದ ಅವಶ್ಯಕತೆ ಇದೆ.





