ದೇಶಾದ್ಯಂತ LPG ಗ್ಯಾಸ್ ಸಿಲಿಂಡರ್ ಕೊರತೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿವೆ. ಹೀಗಾಗಿ, ಜನರು ಮುಗಿಬಿದ್ದು ಮುಂಗಡವಾಗಿ ಸಿಲಿಂಡರ್ ಬುಕ್ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಭಾರತದ ತೈಲ ಸಚಿವಾಲಯ ಸ್ಪಷ್ಟನೆ ನೀಡಿದ್ದು, ದೇಶದಲ್ಲಿ ಯಾವುದೇ ರೀತಿಯ ಎಲ್ಪಿಜಿ ಕೊರತೆ ಉದ್ಭವವಾಗಿಲ್ಲ, ಜನರು ಪ್ಯಾನಿಕ್ ಆಗಿ ಸಿಲಿಂಡರ್ ಬುಕ್ ಮಾಡಿಕೊಳ್ಳುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದೆ. ಅಚ್ಚರಿಯ ಸಂಗತಿಯೆಂದರೆ ಇರಾನ್ ಹಾಗೂ ಅಮೆರಿಕ-ಇಸ್ರೇಲ್ ನಡುವೆ ಯುದ್ಧ ಆರಂಭವಾಗುವುದಕ್ಕೂ ಮೊದಲು ಭಾರತದಲ್ಲಿ ಸರಾಸರಿ 55.7 ಲಕ್ಷ ಇದ್ದ ಎಲ್ಪಿಜಿ ಸಿಲಿಂಡರ್ ಬುಕಿಂಗ್ ಈ 15 ದಿನಗಳಲ್ಲಿ 75.7 ಲಕ್ಷಕ್ಕೆ ಏರಿಕೆಯಾಗಿದೆ. ಇದು ಜನರು ಎಷ್ಟು ಚಿಂತಿತರಾಗಿದ್ದಾರೆ ಎಂಬುದಕ್ಕೆ ನಿದರ್ಶನವಾಗಿದೆ.
ಭಾರತದ ಅನೇಕ ನಗರಗಳಲ್ಲಿ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳ ಅಭಾವ ಎದುರಾಗುತ್ತಿದ್ದಂತೆ ದಿನಬಳಕೆಯ ಎಲ್ಪಿಜಿ ಸಿಲಿಂಡರ್ಗಳನ್ನು ಬುಕ್ ಮಾಡುವ ಗ್ರಾಹಕರ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ರಾಗಕರಿಗೆ ಸ್ಪಷ್ಟನೆ ನೀಡಿದ್ದು, ಬೇಕಾದಷ್ಟು ಸಿಲಿಂಡರ್ ಸ್ಟಾಕ್ ಇರುವುದರಿಂದ ಯಾರೂ ಗೊಂದಲಕ್ಕೊಳಗಾಗಬೇಡಿ, ಚಿಂತಿತರಾಗಬೇಡಿ, ಆತುರದಿಂದ ಸಿಲಿಂಡರ್ ಬುಕ್ ಮಾಡಬೇಡಿ ಎಂದು ಸೂಚಿಸಿದೆ.
ಕಚ್ಚಾ ತೈಲದ ವಿಷಯದಲ್ಲಿ ನಮ್ಮ ದೇಶದಲ್ಲಿ 258 ಮಿಲಿಯನ್ ಮೆಟ್ರಿಕ್ ಟನ್ ಸಂಸ್ಕರಣಾ ಸಾಮರ್ಥ್ಯವಿದೆ. ನಾವು ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ. ಆದ್ದರಿಂದ ದೇಶಕ್ಕೆ ಅದನ್ನು ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ. ನಮ್ಮ ಎಲ್ಲಾ ಸಂಸ್ಕರಣಾಗಾರಗಳು ಶೇ. 100ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಂಸ್ಕರಣಾಗಾರಗಳು ಕಚ್ಚಾ ತೈಲದ ಸಾಕಷ್ಟು ದಾಸ್ತಾನುಗಳನ್ನು ಹೊಂದಿವೆ ಮತ್ತು ಸರಬರಾಜುಗಳನ್ನು ಸಹ ನಿರ್ವಹಿಸಲಾಗುತ್ತಿದೆ. ಕಳೆದೆರಡು ವಾರಗಳಲ್ಲಿ ಎಲ್ಪಿಜಿ ಬುಕಿಂಗ್ ವಿನಂತಿಗಳು ಸುಮಾರು 10 ಪಟ್ಟು ಹೆಚ್ಚಾಗಿದೆ. ಬೇಡಿಕೆಯಲ್ಲಿ ಅಂತಹ ಹಠಾತ್ ಏರಿಕೆಯನ್ನು ನಿಭಾಯಿಸಲು ಸ್ವಲ್ಪ ಸಮಯ ಬೇಕಾಗಿದೆಯೇ ವಿನಃ ಸಂಗ್ರಹವಿಲ್ಲ ಎಂದು ಅರ್ಥವಲ್ಲ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ.





