ಪುತ್ತೂರು: ಸಾಂಸ್ಕೃತಿಕ ನಗರಿ ಮೈಸೂರು ದಸರಾ ಮಹೋತ್ಸವದ ಭಾಗವಾಗಿ ನಡೆಯಲಿರುವ ಸಾಂಪ್ರದಾಯಿಕ ಕಂಬಳ ಕ್ರೀಡಾಕೂಟಕ್ಕೆ ಭರ್ಜರಿ ಸಿದ್ಧತೆಗಳು ಆರಂಭವಾಗಿವೆ. ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಯನ್ನು ಮೈಸೂರಿನ ಮಣ್ಣಿನಲ್ಲಿ ಮೆರೆಯಿಸಲು ಕರಾವಳಿ ಭಾಗದಿಂದ ಬರೋಬ್ಬರಿ 160 ಜೋಡಿ ಕೋಣಗಳು ಪಯಣ ಬೆಳೆಸಲಿವೆ. ಅಕ್ಟೋಬರ್ 16ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಆವರಣದಿಂದ ಹೊರಡಲಿರುವ ಈ ಕೋಣಗಳು, ಮಡಿಕೇರಿ ಮಾರ್ಗವಾಗಿ ಮೈಸೂರು ತಲುಪಲಿವೆ. ಅಕ್ಟೋಬರ್ 18 ಮತ್ತು 19ರಂದು ಕಂಬಳ ಕೂಟ ನಡೆಯಲಿದ್ದು, ಸ್ಪರ್ಧೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.


ಪಂದ್ಯಾವಳಿಗಾಗಿ ಮೈಸೂರಿನಲ್ಲಿ 147 ಮೀಟರ್ ಉದ್ದದ ಕಂಬಳ ಕೆರೆಯನ್ನು ಸಿದ್ಧಪಡಿಸಲಾಗುತ್ತಿದ್ದು, ಅಕ್ಟೋಬರ್ 10ರಂದು ಸುಮಾರು ಐದು ಜೋಡಿ ಕೋಣಗಳೊಂದಿಗೆ ಪ್ರಾಯೋಗಿಕ ಓಟ (ಟ್ರಯಲ್ ರನ್) ನಡೆಯಲಿದೆ.ಸಾರ್ವಜನಿಕರಿಗಾಗಿ ಸುಮಾರು 15,000 ಜನ ಕುಳಿತು ವೀಕ್ಷಿಸಲು ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ಹೆಚ್ಚಿನ ಜನರಿಗೆ ಪಂದ್ಯಾವಳಿ ವೀಕ್ಷಿಸಲು ಅನುಕೂಲವಾಗುವಂತೆ ಮೂರು ವಿಭಿನ್ನ ಸಮಯಗಳಲ್ಲಿ ಉಚಿತ ಪಾಸ್ಗಳನ್ನು ನೀಡಲಾಗುತ್ತದೆ. ಜೊತೆಗೆ, ಪಾಸ್ ಇಲ್ಲದ ಹೆಚ್ಚುವರಿ 5,000 ವೀಕ್ಷಕರಿಗೂ ಅವಕಾಶ ಕಲ್ಪಿಸಲಾಗುತ್ತದೆ. ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಸುಮಾರು 25 ಲಕ್ಷ ಜನರು ಈ ಕಂಬಳ ಕ್ರೀಡೆಯನ್ನು ವೀಕ್ಷಿಸುವ ನಿರೀಕ್ಷೆಯಿದೆ ಎಂದು ರೈ ಹೇಳಿದ್ದಾರೆ.ಸಾರಿಗೆ ಹಾಗೂ ನಿರ್ವಹಣೆಗಾಗಿ ರಾಜ್ಯ ಸರ್ಕಾರವು ಹಿರಿಯ ವಿಭಾಗದ ಪ್ರತಿ ಜೋಡಿ ಕೋಣಕ್ಕೆ 65,000 ರೂ. ಹಾಗೂ ಕಿರಿಯ ವಿಭಾಗದ ಪ್ರತಿ ಜೋಡಿಗೆ 50,000 ರೂ. ಪ್ರೋತ್ಸಾಹಧನ ನೀಡಲಿದೆ. ಈ ಗೌರವಧನವನ್ನು ಹೆಚ್ಚಿಸುವ ಕುರಿತು ಮೈಸೂರು ಜಿಲ್ಲಾಡಳಿತ ಹಾಗೂ ದಸರಾ ಸಮಿತಿಯೊಂದಿಗೆ ಚರ್ಚಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಸ್ಪರ್ಧೆಯ ಹಿರಿಯ ವಿಭಾಗದಲ್ಲಿ ವಿಜೇತರಾಗುವ ಕೋಣಗಳ ಮಾಲೀಕರಿಗೆ 16 ಗ್ರಾಂ ಚಿನ್ನ ಹಾಗೂ ರನ್ನರ್ ಅಪ್ಗೆ 8 ಗ್ರಾಂ ಚಿನ್ನ ನೀಡಲಾಗುತ್ತದೆ. ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆಯುವ ಕೋಣಗಳಿಗೂ ಚಿನ್ನದ ಪದಕ ನೀಡುವಂತೆ ಕೋಣಗಳ ಮಾಲೀಕರು ಮನವಿ ಮಾಡಿದ್ದಾರೆ.ಈ ಬಾರಿಯ ದಸರಾ ಕಂಬಳದ ವಿಶೇಷತೆಯಾಗಿ ಕರಾವಳಿ ಕರ್ನಾಟಕದ ಶೈಲಿಯ ವೈವಿಧ್ಯಮಯ ಖಾದ್ಯಗಳ ಮಳಿಗೆಗಳನ್ನು ಸುಮಾರು ಐದು ಎಕರೆ ಪ್ರದೇಶದಲ್ಲಿ ತೆರೆಯಲಾಗುತ್ತದೆ.ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.



