ಮಂಗಳೂರು-ತಣ್ಣೀರುಬಾವಿ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಲೋಕಾರ್ಪಣೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಸೇತುವೆಯಿಂದಾಗಿ ಸುತ್ತಿ ಬಳಸಿ ಓಡಾಟಕ್ಕೆ ಬ್ರೇಕ್ ಬೀಳಲಿದೆ. ಹಾಗಾದರೆ ಈ ಸೇತುವೆಯ ವಿಶೇಷತೆ ಏನು, ವೆಚ್ಚ ಎಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಂಗಳೂರು, ಮೇ 9: ಮಂಗಳೂರು-ತಣ್ಣೀರುಬಾವಿ ಬ್ರಿಡ್ಜ್ ಮಂಗಳೂರಿನ ಬಹುವರ್ಷದ ಬೇಡಿಕೆ. ಸದ್ಯ ಬ್ರಿಡ್ಜ್ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆ ಮೂಲಕ ತಣ್ಣೀರುಬಾವಿ ಬೀಚ್ಗೆ ತೆರಳಲು ದಶಕಗಳಿಂದ ಇದ್ದ ಸಂಚಾರ ಸಂಕಷ್ಟಕ್ಕೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ.
ತಣ್ಣೀರುಬಾವಿ ಬೀಚ್ ಮಂಗಳೂರು ಸಿಟಿಗೆ ಹೊಂದಿಕೊಂಡಿರುವ ಬೀಚ್. ಮಂಗಳೂರು ಸಿಟಿಯ ಒಂದು ತುದಿಯಿಂದ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿರುವ ಈ ಬೀಚ್ಗೆ ವಾಹನದಲ್ಲಿ ಹೋಗಬೇಕು ಅಂದರೆ 15 ರಿಂದ 20 ಕಿ.ಮೀ ಸುತ್ತಿಕೊಂಡು ಹೋಗಬೇಕಿತ್ತು. ಆದರೆ ಫೆರಿಯಲ್ಲಿ ಹೋಗೋದಾದರೆ ಕೆಲವೇ ಮೀಟರ್ ಕ್ರಮಿಸಿದರೆ ಸಾಕಿತ್ತು.
ಇನ್ನು ತಣ್ಣೀರುಬಾವಿ ಸುತ್ತಾಮುತ್ತಾ 4 ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಅವರು ಮಂಗಳೂರಿಗೆ ಬರಬೇಕು ಅಂದರೆ ಫೆರಿಯಲ್ಲಿ ಬರಬೇಕಿತ್ತು. ರಸ್ತೆ ಮೂಲಕ ಬರಬೇಕು ಅಂದರೆ ಮತ್ತೆದೇ 15 ಕಿ.ಮೀ ಸುತ್ತಾಟ. ಆದ್ದರಿಂದ ಮೆಡಿಕಲ್ ಎಮರ್ಜೆನ್ಸಿ ಸೇರಿದಂತೆ ವಿವಿಧ ರೀತಿಯಲ್ಲಿ ಜನರಿಗೆ ತೊಂದರೆ ಆಗುತ್ತಿತ್ತು. ಆದರೆ ಇದೀಗ ಫಲ್ಗುಣಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುತ್ತಿರುವುದರಿಂದ ಇದಕ್ಕೆ ಮುಕ್ತಿ ಸಿಗಲಿದೆ.
ವೆಚ್ಚ ಮತ್ತು ವಿನ್ಯಾಸ
64 ಕೋಟಿ ರೂ ವೆಚ್ಚದಲ್ಲಿ ಒಟ್ಟು 285 ಮೀಟರ್ ಸೇತುವೆ ಇದಾಗಿದ್ದು, 100 ಮೀಟರ್ ಬೋ-ಸ್ಟ್ರಿಂಗ್ ಸೇತುವೆ ನಿರ್ಮಾಣ ಮಾಡುಲಾಗುತ್ತಿದೆ. ಆ ಮೂಲಕ 30 ರಿಂದ 35 ನಿಮಿಷ ಸಾಗುವ ದಾರಿಯನ್ನು 8 ರಿಂದ 10 ನಿಮಿಷಕ್ಕೆ ಇಳಿಸುವಲ್ಲಿ ಈ ಸೇತುವೆ ಉಪಯೋಗಕಾರಿಯಾಗಿದೆ. ಈ ಸೇತುವೆ ಎಲ್ಲಾ ಮಾದರಿಯ ವಾಹನಗಳು ಸಂಚಾರ ಮಾಡುವ ಸಾಮರ್ಥ್ಯ ಹೊಂದಿದೆ. ಈ ಬ್ರಿಡ್ಜ್ ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.
ಇನ್ನೇನು ಮಳೆಗಾಲ ಆರಂಭವಾಗುತ್ತಿದೆ. ಹೀಗಾಗಿ ಕಾಮಗಾರಿ ಅದೆಷ್ಟು ವೇಗವಾಗಿ ಸಾಗುತ್ತದೆ ಎನ್ನುವುದು ಮುಂದಿರುವ ಪ್ರಶ್ನೆ. ಇನ್ನು ಸಚಿವರು ಲೋಕಾರ್ಪಣೆ ತಿಂಗಳು ಫಿಕ್ಸ್ ಮಾಡಿ ಹೋಗಿದ್ದಾರೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಅದಕ್ಕೆ ಬದ್ಧರಾಗಿರುತ್ತಾರಾ ಕಾದುನೋಡಬೇಕಿದೆ.





