ಬೆಳ್ತಂಗಡಿ: ತಾಲೂಕಿನ ನಾವೂರಿನಲ್ಲಿ ವೈದ್ಯಕೀಯ ವೃತ್ತಿಯೊಂದಿಗೆ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಡಾ. ಪ್ರದೀಪ್ ನಾವೂರ ಅವರ ಕ್ಲಿನಿಕ್ಗೆ ರಾತ್ರಿ ವೇಳೆಯಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿ, ಅಪಾರ ಪ್ರಮಾಣದ ಸೊತ್ತುಗಳನ್ನು ನಾಶಪಡಿಸಿರುವ ಹೇಯ ಘಟನೆ ಬೆಳಕಿಗೆ ಬಂದಿದೆ.
ಬೆಂಕಿ ಅನಾಹುತದಿಂದ ಕ್ಲಿನಿಕ್ನಲ್ಲಿದ್ದ ಬೆಲೆಬಾಳುವ ವೈದ್ಯಕೀಯ ಉಪಕರಣಗಳು, ಲ್ಯಾಬೊರೇಟರಿ ಸಾಮಗ್ರಿಗಳು ಹಾಗೂ ಪೀಠೋಪಕರಣಗಳು ಸಂಪೂರ್ಣವಾಗಿ ಭಸ್ಮಗೊಂಡಿವೆ.
ಈ ದುಷ್ಕೃತ್ಯವನ್ನು ಉಗ್ರವಾಗಿ ಖಂಡಿಸಿರುವ ತಾಲೂಕಿನ ಪ್ರಮುಖ ವೈದ್ಯಕೀಯ ಸಂಘಟನೆಗಳಾದ ಆಯುಷ್ ಫೆಡರೇಶನ್ ಆಫ್ ಇಂಡಿಯಾ (AFI), ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಹಾಗೂ ಇಂಡಿಯನ್ ಡೆಂಟಲ್ ಅಸೋಸಿಯೇಷನ್ (IDA) ಪ್ರತಿನಿಧಿಗಳು ಬೆಳ್ತಂಗಡಿಯಲ್ಲಿ ತುರ್ತು ಸಭೆ ಸೇರಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ, ನಿಯೋಗದ ರೂಪದಲ್ಲಿ ತೆರಳಿದ ವೈದ್ಯರು ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿಗಳು, ತಹಸೀಲ್ದಾರ್ ಹಾಗೂ ಡಿವೈಎಸ್ಪಿ (DySP) ಅವರಿಗೆ ಅಹವಾಲು ಸಲ್ಲಿಸಿ, ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ AFI ಅಧ್ಯಕ್ಷ ಡಾ. ಕೃಷ್ಣ ಎಂ. ಗೋಖಲೆ, ತಾಲೂಕು AFI ಅಧ್ಯಕ್ಷೆ ಡಾ. ಸುಷ್ಮಾ ಡೋಂಗ್ರೆ, IMA ತಾಲೂಕು ಅಧ್ಯಕ್ಷೆ ಡಾ. ಸ್ವರ್ಣಲತಾ, ಡಾ. ರಜತ್, IDA ಪ್ರತಿನಿಧಿಗಳಾದ ಡಾ. ರಾಘವೇಂದ್ರ ಪಿದಮಲೆ, ಡಾ. ಶಶಿಧರ್ ಡೋಂಗ್ರೆ, ಬೆನಕ ಆಸ್ಪತ್ರೆಯ ಡಾ. ಗೋಪಾಲಕೃಷ್ಣ, ಅಭಯ ಆಸ್ಪತ್ರೆಯ ಡಾ. ಶ್ರೀಹರಿ ಭಟ್, ವೇಣೂರು ನಮನ ಕ್ಲಿನಿಕ್ನ ಡಾ. ಶಾಂತಿಪ್ರಸಾದ್, ವೇಣೂರು ಮಹಾವೀರ ಕ್ಲಿನಿಕ್ನ ಡಾ. ಜಗದೀಶ್ ಚೌಟ ಸೇರಿದಂತೆ ತಾಲೂಕಿನ ಹಲವಾರು ಹಿರಿಯ ಹಾಗೂ ಕಿರಿಯ ವೈದ್ಯರು ಉಪಸ್ಥಿತರಿದ್ದರು




