ಕೊಲೆ, ಅಪಹರಣ ಪ್ರಕರಣಗಳ ಆರೋಪಿ ಮೇಲೆ ಪೊಲೀಸರು ಫೈರಿಂಗ್ ನಡೆಸಿರುವ ಘಟನೆ ಬೆಂಗಳೂರಿನ ಬೊಮ್ಮಸಂದ್ರ ಬಳಿ ನಡೆದಿದೆ. ಸ್ಥಳ ಮಹಜರು ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಮತ್ತೆ ಬಂಧಿಸಲಾಗಿದೆ. ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಹೆಡ್ ಕಾನ್ಸ್ಸ್ಟೇಬಲ್ ಮೇಲೆ ದಾಳಿ
ಉದ್ಯಮಿ ಬಾಲಪ್ಪ ರೆಡ್ಡಿ, ಮಾದೇಶ್ ಎಂಬುವರ ಕೊಲೆ ಪ್ರಕರಣದ ಸಂಬಂಧ ಆರೋಪಿ ರವಿ ಪ್ರಸಾದ್ ರೆಡ್ಡಿಯನ್ನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದರು. ಕೇಸ್ ಸಂಬಂಧ ಸ್ಥಳ ಮಹಜರಿಗೆ ಪೊಲೀಸರು ಕರೆದೊಯ್ದಿದ್ದ ವೇಳೆ ಆರೋಪಿ, ಹೆಡ್ ಕಾನ್ಸ್ಸ್ಟೇಬಲ್ ಅಶೋಕ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ. ಈ ವೇಳೆ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ವಾರ್ನಿಂಗ್ ನೀಡಿದರೂ ದಾಳಿ ನಿಲ್ಲಿಸದಿದ್ದಾಗ ಆರೋಪಿ ಮೇಲೆ ಹೆಬ್ಬಗೋಡಿ ಇನ್ಸ್ಪೆಕ್ಟರ್ ಸೋಮಶೇಖರ್ ಫೈರಿಂಗ್ ಮಾಡಿದ್ದಾರೆ. ರವಿ ಪ್ರಸಾದ್ ರೆಡ್ಡಿ ಕಾಲಿಗೆ ಎರಡು ಸುತ್ತು ಗುಂಡು ಹೊಡೆದು ಬಂಧಿಸಿದ್ದಾರೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ DCP ನಾರಾಯಣ್ ಭೇಟಿ ನೀಡಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





