ಬೆಳ್ತಂಗಡಿ; ರಾಜ್ಯ ಮಟ್ಟದಲ್ಲಿ ನೋಂದಾವಣೆಗೊಂಡಿರುವ ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರಿ ಸಂಘ ನಿ. ಕಡಬ ಇದರ ನಿರ್ದೇಶಕರಾಗಿ ಹಿರಿಯ ಪತ್ರಕರ್ತ ಹಾಗೂ ಸಂಘಟಕ ಅಶ್ರಫ್ ಆಲಿಕುಂಞಿ ಮುಂಡಾಜೆ ಆಯ್ಕೆಯಾಗಿದ್ದಾರೆ.
ಸಂಘದ ಬೈಲಾದಲ್ಲಿ ನಮೂದಿಸಿದ 53/1 ರ ಪ್ರಕಾರ ಖಾಲಿಯಾದ ಹಿಂದುಳಿದ ವರ್ಗ ಸ್ಥಾನಕ್ಕೆ ನಿರ್ದೇಶಕರಾಗಿ ಆಯ್ಕೆ ಮಾಡಿದ ಬಗ್ಗೆ ಅಧಿಕೃತ ಆದೇಶ ಬಿಡುಗಡೆಗೊಂಡಿದೆ. ಇದರ ಜೊತೆಗೆ ಬ್ಯಾಂಕಿನ ಬೆಳ್ತಂಗಡಿ ಶಾಖೆಯ ಎಲ್ಲಾ ವ್ಯವಹಾರವನ್ನೂ ನೋಡಿಕೊಳ್ಳುವಂತೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
ಸೌಭಾಗ್ಯ ಸೊಸೈಟಿಯು ಕಡಬದಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಸುಳ್ಯ, ಕೊಡಗಿನ ವಿರಾಜಪೇಟೆ ಹಾಗೂ ಕಳೆದ 11 ತಿಂಗಳಿನಿಂದ ಬೆಳ್ತಂಗಡಿಯಲ್ಲೂ ಶಾಖೆ ಹೊಂದಿ ತಾ.ಪಂ ಕಚೇರಿಬಳಿ ಕಾರ್ಯನಿರ್ವಹಿಸುತ್ತಿದೆ. ವಿಕಲ ಚೇತನರಿಗಾಗಿಯೇ ಇರುವ ಈ ಸಂಸ್ಥೆಯಲ್ಲಿ ಇತರರಿಗೂ ಹಣಕಾಸುವ್ಯವಹಾರದ ಅವಕಾಶಗಳನ್ನು ಒದಗಿಸುತ್ತಿದೆ.
ಕಳೆದ 26 ವರ್ಷಗಳಿಂದ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಿರಿಯ ವರದಿಗಾರರಾಗಿ, ಜನಜಾಗೃತಿ ವೇದಿಕೆಯ ವ್ಯಸನಮುಕ್ತ ಅಭಿಯಾನದ ಸಂಪನ್ಮೂಲ ವ್ಯಕ್ತಿಯಾಗಿ, ಅತ್ಯುತ್ತಮ ಕಾರ್ಯಕ್ರಮ ಉದ್ಘೋಷಕರಾಗಿ, ವಾಗ್ಮಿಗಳಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರು ಸರಕಾರದ ಪ್ರವಾಸೋದ್ಯಮ ಇಲಾಖೆಯಿಂದ ನೋಂದಾಯಿತಗೊಂಡಿರುವ “ತಮನ್ನಾ ಹೋಮ್ ಸ್ಟೇ” ಎಂಬ ಉದ್ಯಮವನ್ನೂ ಕೂಡ ಬೆಳ್ತಂಗಡಿ ನಗರದಲ್ಲಿ ನಡೆಸಿಕೊಂಡುಬರುತ್ತಿದ್ದಾರೆ.
ಸಾಮಾಜಿಕ ಸಂಘಟನೆಗಳಾದ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ, ತಾ. ಕನ್ನಡ ಸಾಹಿತ್ಯ ಪರಿಷತ್ತು ಮೊದಲಾದ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.






