ರಾಜ್ಯ ಸರ್ಕಾರವು ಗುಟ್ಕಾ, ತಂಬಾಕು ಹಾಗೂ ಪಾನ್ ಮಸಾಲ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದ ಮೇಲೆ ಒಂದು ವರ್ಷದ ಮಟ್ಟಿಗೆ ನಿಷೇಧ ಹೇರಿದೆ. ಇದರ ಬೆನ್ನಲ್ಲೇ ಕರ್ನಾಟಕದ ಅಡಿಕೆ ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಸೃಷ್ಟಿಯಾಗಿದೆ. ಈ ನಿರ್ಧಾರದಿಂದಾಗಿ ವರ್ತಕರು ಅಡಿಕೆ ಖರೀದಿಯನ್ನು ದಿಢೀರ್ ಸ್ಥಗಿತಗೊಳಿಸಿದ್ದು, ಅಡಿಕೆ ಬೆಳೆಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.


ಭಾರತದಲ್ಲೇ ಕರ್ನಾಟಕ ರಾಜ್ಯವು ಅಡಿಕೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ದೇಶದ ಒಟ್ಟು ಅಡಿಕೆ ಉತ್ಪಾದನೆಯ ಪೈಕಿ ಶೇಕಡಾ 70ರಿಂದ 75 ರಷ್ಟು ಪಾಲು ರಾಜ್ಯದ್ದೇ ಆಗಿದೆ. ಇಲ್ಲಿನ ಸುಮಾರು 5 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಮಲೆನಾಡು, ಕರಾವಳಿ ಹಾಗೂ ಬಯಲುಸೀಮೆಯ ಪ್ರಮುಖ ಜಿಲ್ಲೆಗಳ ರೈತ ಕುಟುಂಬಗಳಿಗೆ ಅಡಿಕೆಯೇ ಪ್ರಮುಖ ಜೀವನಾಧಾರವಾಗಿದೆ. ಆದರೆ ಈಗ ಸರ್ಕಾರದ ಈ ನಿಷೇಧದ ನಿರ್ಧಾರವು ಅಡಿಕೆ ಬೆಳೆಗಾರರ ಹೊಟ್ಟೆ ಮೇಲೆ ಹೊಡೆದಂತಾಗಿದೆ.
ರಾಜ್ಯದಲ್ಲಿ ಹೆಚ್ಚಾಗಿ ಎಲ್ಲೆಲ್ಲಿ ಅಡಿಕೆ ಬೆಳೆಯಲಾಗುತ್ತದೆ?
ರಾಜ್ಯದಲ್ಲೇ ಅತ್ಯಧಿಕ ಅಡಿಕೆ ಬೆಳೆಯುವ ಜಿಲ್ಲೆಯಾಗಿ ಶಿವಮೊಗ್ಗ ಗುರುತಿಸಿಕೊಂಡಿದ್ದು, ತೀರ್ಥಹಳ್ಳಿ, ಸಾಗರ, ಹೊಸನಗರ, ಸೊರಬ ಹಾಗೂ ಶಿಕಾರಿಪುರದಲ್ಲಿ ಅಡಿಕೆ ಪ್ರಮುಖ ಬೆಳೆಯಾಗಿದೆ. ಅದರಲ್ಲೂ ದಾವಣಗೆರೆ ಜಿಲ್ಲೆಯ ಚನ್ನಗಿರಿಯನ್ನು ಅಡಿಕೆಯ ನಾಡು ಎಂದೇ ಕರೆಯಲಾಗುತ್ತದೆ. ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಪ್ರದೇಶಗಳು ಸಹ ಅಡಿಕೆಗೆ ಹೆಸರುವಾಸಿಯಾಗಿದ್ದು, ಶಿರಸಿ ಅಡಿಕೆಗೆ ಭೌಗೋಳಿಕ ಸೂಚ್ಯಂಕ (GI Tag) ಮಾನ್ಯತೆಯೂ ಸಿಕ್ಕಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲೂ ವ್ಯಾಪಕವಾಗಿ ಬೆಳೆಯಲಾಗುತ್ತಿದೆ.
ತಂಬಾಕು ಉತ್ಪನ್ನಗಳ ನಿಷೇಧ, ಅಡಿಕೆ ಖರೀದಿ ಸ್ಥಗಿತ
ತಂಬಾಕು ಉತ್ಪನ್ನಗಳ ನಿಷೇಧದ ಬಿಸಿ ಅಡಿಕೆ ಧಾರಣೆಯ ಮೇಲೆ ತಕ್ಷಣವೇ ಪರಿಣಾಮ ಬೀರಿದೆ. ಉದಾಹರಣೆಗೆ ಶಿವಮೊಗ್ಗ ಎಪಿಎಂಸಿ ಮಾರುಕಟ್ಟೆಯಲ್ಲಿ ಬುಧವಾರ ಬೆಳಗ್ಗೆ ಕ್ವಿಂಟಾಲ್ ಅಡಿಕೆಗೆ 53,000 ರೂಪಾಯಿವರೆಗೆ ವ್ಯಾಪಾರ ಆಗುತ್ತಿತ್ತು. ಆದರೆ, ಸರ್ಕಾರದ ನಿಷೇಧದ ಆದೇಶ ಹೊರಬಿದ್ದ ತಕ್ಷಣವೇ ಮಾರುಕಟ್ಟೆಯಲ್ಲಿ ಅಡಿಕೆಯನ್ನು ಕೇಳುವವರೇ ಇಲ್ಲದಂತಾಯಿತು. ದಲ್ಲಾಳಿ ಮಂಡಿಗಳು ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ಅಡಿಕೆ ಖರೀದಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.
ಅಡಿಕೆ ಪೂರೈಕೆಯಲ್ಲಿ ಕರ್ನಾಟಕ ನಂಬರ್ 1
ಬೆಳಗ್ಗೆ ಕ್ವಿಂಟಾಲ್ಗೆ 53,000 ರೂಪಾಯಿ ಇದ್ದ ದರ ಸಂಜೆಯಾಗುತ್ತಿದ್ದಂತೆ ಗಿರಾಕಿಗಳಿಲ್ಲದೆ ಶೂನ್ಯಕ್ಕೆ ಕುಸಿದಿದೆ. ರಾಜ್ಯದಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ದೇಶದ ಒಟ್ಟು ಅಡಿಕೆ ಪೂರೈಕೆಯಲ್ಲಿ ಕರ್ನಾಟಕದ ಪಾಲು ಶೇಕಡ 7 ರಿಂದ 75 ರಷ್ಟಿದೆ. ಆದರೆ ಇದೀಗ ದಲ್ಲಾಳಿ ಮಂಡಿಗಳು ಹಾಗೂ ಚಿಲ್ಲರೆ ಮಾರುಕಟ್ಟೆಗಳಲ್ಲಿ ಖರೀದಿ ಸಂಪೂರ್ಣ ಬಂದ್ ಆಗಿದೆ.
ಅಡಿಕೆ ಬೆಳೆಗಾರರನ್ನ ಕಂಗೆಡೆಸಿದ ಈ ನಿರ್ಧಾರ
ಅಡಿಕೆ ಬೆಳೆಗಾರರ ಸಂಘ, ಅಡಿಕೆ ವರ್ತಕರ ಸಂಘಗಳು ಹಾಗೂ ವಿವಿಧ ಬೆಳೆಗಾರರ ಒಕ್ಕೂಟಗಳು ತುರ್ತು ಸಭೆಗಳನ್ನು ನಡೆಸಿ ಮುಂದಿನ ಕಾನೂನಾತ್ಮಕ ಹಾಗೂ ಹೋರಾಟದ ಹಾದಿಯ ಬಗ್ಗೆ ಚರ್ಚೆ ನಡೆಸುತ್ತಿವೆ. ಸರ್ಕಾರವು ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಸೂಕ್ತ ಮಾರ್ಪಾಡು ಮಾಡಬಹುದು ಎಂಬ ನಿರೀಕ್ಷೆಯಲ್ಲೂ ಬೆಳೆಗಾರರಿದ್ದಾರೆ. ಒಟ್ಟಿನಲ್ಲಿ ಹೇಳವುದಾದರೆ ಸರ್ಕಾರದ ಈ ದಿಢೀರ್ ನಿಷೇಧದ ನಿರ್ಧಾರವು ರಾಜ್ಯದ ಅಡಿಕೆ ಬೆಳೆಗಾರರನ್ನು ಕಂಗೆಡೆಸಿರುವುದಂತೂ ನಿಜ. ಸರ್ಕಾರ ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರಿಗೆ ಅನುಕೂಲ ಆಗುವಂತೆ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ ಅಷ್ಟೇ.



