ಅಹಮದಾಬಾದ್, ಜು. 7: 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದ 49 ಅಪರಾಧಿಗಳಲ್ಲಿ 38 ಮಂದಿಗೆ ಮರಣದಂಡನೆ ಹಾಗೂ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಶೇಷ ನ್ಯಾಯಲಯ ತೀರ್ಪನ್ನು ಮಂಗಳವಾರ ಗುಜರಾತ್ ಹೈಕೋರ್ಟ್ ಎತ್ತಿ ಹಿಡಿದಿದೆ.
ಫೆಬ್ರವರಿ 2022 ರಲ್ಲಿ, ವಿಶೇಷ ನ್ಯಾಯಾಲಯವು ಪ್ರಕರಣದ 38 ಅಪರಾಧಿಗಳಿಗೆ ಮರಣದಂಡನೆ ಮತ್ತು ಇತರ 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತ್ತು. ಬಳಿಕ ಅಪರಾಧಿಗಳು ಈ ತೀರ್ಪನ್ನು ಪ್ರಶ್ನಿಸಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ವೈ. ಕೊಗ್ಜೆ ಹಾಗೂ ಸಮೀರ್ ಡೇವ್ ಅವರ ವಿಭಾಗೀಯ ಪೀಠವು ಅಪರಾಧಿಗಳಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದು, ಅಪರಾಧಿಗಳು ಸಲ್ಲಿಸಿದ ಎಲ್ಲಾ ಮೇಲ್ಮನವಿಗಳನ್ನ ವಜಾಗೊಳಿಸಿದೆ.
ಜುಲೈ 26, 2008 ರಂದು ಅಹಮದಾಬಾದ್ನ ವಿವಿಧ ಸ್ಥಳಗಳಲ್ಲಿ 21 ಬಾಂಬ್ಗಳನ್ನು ಸ್ಫೋಟಿಸಲಾಗಿತ್ತು. 70 ನಿಮಿಷಗಳ ಅಂತರದಲ್ಲಿ ಸುಮಾರು 21 ಬಾಂಬ್ಗಳನ್ನ ಸ್ಫೋಟಿಸಲಾಗಿತ್ತು. ಈ ಘಟನೆಯಲ್ಲಿ 56 ಜನರು ಸಾವನ್ನಪ್ಪಿದರು. ಸುಮಾರು 200 ಮಂದಿ ಗಾಯಗೊಂಡಿದ್ದರು.



