ಟೈರ್ ಸ್ಫೋಟಗೊಂಡು ಅವಘಡ, 36 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು, ಪ್ರಯಾಣಿಕರ ಲಗೇಜ್, ಅಮೂಲ್ಯ ವಸ್ತುಗಳು ಭಸ್ಮ
ಹಾಸನ, ಮೇ 16: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರ ಟೈರ್ ಸ್ಫೋಟಗೊಂಡು ಅದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಬಸ್ನಲ್ಲಿ ಸುಮಾರು 36 ಪ್ರಯಾಣಿಕರಿದ್ದು, ಟೈರ್ ಸ್ಫೋಟಗೊಳ್ಳುತ್ತಿದ್ದಂತೆಯೇ ಚಾಲಕ ತಕ್ಷಣವೇ ಜಾಗರೂಕತೆಯಿಂದ ಬಸ್ ನಿಲ್ಲಿಸಿ ಎಲ್ಲರನ್ನೂ ಕೆಳಗಿಳಿಸಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಆದರೆ, ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಪ್ರಯಾಣಿಕರ ಲಗೇಜ್ಗಳು, ಮೊಬೈಲ್ಗಳು ಹಾಗೂ ಬೆಲೆಬಾಳುವ ವಸ್ತುಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಧಾವಿಸಿದ್ದು, ಕಾರ್ಯಾಚರಣೆ ನಡೆಸಿದ್ದಾರೆ. ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಹೆದ್ದಾರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.





