ಪೊಲೀಸರಿಗೆ ಬಿಡುವಿಲ್ಲ ಕೆಲಸ. ಹಗಲು-ರಾತ್ರಿ ಎನ್ನದೆ, ಹಬ್ಬ-ಹರಿದಿನಗಳನ್ನೂ ಲೆಕ್ಕಿಸದೆ ಜನರಿಗಾಗಿ ದುಡಿಯುವ ನಮ್ಮ ಪೊಲೀಸರಿಗೆ ಮನೆಯವರ ಜೊತೆ ಸಂಭ್ರಮಿಸಲು ಸಮಯವೇ ಇರುವುದಿಲ್ಲ. ಮಗಳ ಬರ್ತ್ಡೇ ಅಥವಾ ಸ್ವತಃ ತಮ್ಮದೇ ಮದುವೆ ವಾರ್ಷಿಕೋತ್ಸವವಿದ್ದರೂ ಕರ್ತವ್ಯಕ್ಕೆ ಹಾಜರಾಗಬೇಕಾದ ಅನಿವಾರ್ಯತೆ. ಇದೆಲ್ಲವುದನ್ನು ಗಮನಿಸಿದ ಗೃಹ ಇಲಾಖೆ, ಪೊಲೀಸ್ ಸಿಬ್ಬಂದಿಗೆ ಭರ್ಜರಿ ಗಿಫ್ಟ್ ನೀಡಿದೆ.
ಬೆಂಗಳೂರು, ಜ.29: ಕರ್ನಾಟಕ ಪೊಲೀಸ್ ಸಿಬ್ಬಂದಿಯ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ ನೀಡುವಂತೆ ಆದೇಶ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನದಂದು ಕುಟುಂಬದವರ ಜೊತೆ ಕಾಲ ಕಳೆಯಲು ಅನುಕೂಲವಾಗುವಂತೆ ಆ ದಿನ ಕಡ್ಡಾಯ ರಜೆ ನೀಡಿ. ಇದರಿಂದ ಒತ್ತಡದ ಕೆಲಸ ಹಾಗೂ ವ್ಯಯಕ್ತಿಕ ಜೀವನ ಸಮತೋಲನಗೆ ರಜೆ ಸಹಾಯಕವಾಗಲಿದೆ. ಹೀಗಾಗಿ ಸಾಂದರ್ಭಿಕ ರಜೆ ನೀಡುವಂತೆ ಆದೇಶಿಸಿದ್ದಾರೆ.
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನದಂದು ಕುಟುಂಬದವರ ಜೊತೆ ಕಾಲ ಕಳೆಯಲು ಅನುಕೂಲವಾಗುವಂತೆ ಆ ದಿನ ಕಡ್ಡಾಯ ರಜೆ ನೀಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಒಳಾಡಳಿತ ಇಲಾಖೆಯು ಪೊಲೀಸ್ ಮಹಾನಿರ್ದೇಶಕರಿಗೆ (DG & IGP) ಅಧಿಕೃತ ಪತ್ರ ಬರೆದಿತ್ತು. ಇದನ್ನು ಪರಿಶೀಲಿಸಿದ ಡಿಜಿ ಡಾ ಸಲೀಂ ಅವರು, ಕಡ್ಡಾಯ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.
ಯಾರಿಗೆಲ್ಲ ಈ ರಜೆ ಸಿಗಲಿದೆ?
ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ನೀಡಿದ ಸಲಹೆಯ ಮೇರೆಗೆ ಈ ನಿರ್ಧಾರಕ್ಕೆ ಚಾಲನೆ ಸಿಕ್ಕಿದೆ. ಪ್ರಮುಖವಾಗಿ ಕೆಳ ಹಂತದ ಸಿಬ್ಬಂದಿಗಳಾದ ಪೊಲೀಸ್ ಕಾನ್ಸ್ಟೇಬಲ್ (PC), ಹೆಡ್ ಕಾನ್ಸ್ಟೇಬಲ್ (HC) ಸಹಾಯಕ ಪೊಲೀಸ್ ಉಪನಿರೀಕ್ಷಕರು (ASI), ಈ ಶ್ರೇಣಿಯ ಅಧಿಕಾರಿಗಳಿಗೆ ರಜೆ ಸೌಲಭ್ಯ ಸಿಗಲಿದೆ.






