ನವದೆಹಲಿ: ದೇಶದ ಅತಿದೊಡ್ಡ ಪ್ಯಾಕೇಜ್ಡ್ ಕುಡಿಯುವ ನೀರಿನ ಬ್ರ್ಯಾಂಡ್ ಆದ ಬಿಸ್ಲೆರಿ ಒಂದೇ ವಾರದಲ್ಲಿ ಮತ್ತೊಂದು ದೊಡ್ಡ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಗೋವಾ ಘಟಕದ ನೀರಿನ ಮಾದರಿ ಅಸುರಕ್ಷಿತ ಎಂದು ಘೋಷಣೆಯಾದ ಬೆನ್ನಲ್ಲೇ, ಇದೀಗ ಪಶ್ಚಿಮ ಬಂಗಾಳದ ಘಟಕದಿಂದ ಸಂಗ್ರಹಿಸಿದ ಬಿಸ್ಲೆರಿ ನೀರಿನಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಬಿಸ್ಲೆರಿ ಇಂಟರ್ನ್ಯಾಷನಲ್ ವಿರುದ್ಧ ಎರಡನೇ ಬಾರಿಗೆ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದೆ.
ಜಲಪೈಗುರಿ ಘಟಕದ ಮಾದರಿಯಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪತ್ತೆ ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ತೆಲಿಪಾರಾ ಗ್ರಾಮದಲ್ಲಿರುವ ಬಿಸ್ಲೆರಿ ಘಟಕದಿಂದ ಸಂಗ್ರಹಿಸಲಾದ ಕುಡಿಯುವ ನೀರಿನ ಮಾದರಿಯಲ್ಲಿ (ಬ್ಯಾಚ್ ಸಂಖ್ಯೆ PB 201) ಅಪಾಯಕಾರಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. ಸಾಮಾನ್ಯವಾಗಿ ಒಳಚರಂಡಿ ನೀರು ಸೋರಿಕೆ ಅಥವಾ ಹಾನಿಗೊಳಗಾದ ಪೈಪ್ಗಳ ಮೂಲಕ ಈ ಬ್ಯಾಕ್ಟೀರಿಯಾ ಕುಡಿಯುವ ನೀರಿಗೆ ಸೇರಿಕೊಳ್ಳುತ್ತದೆ. ಪ್ರಾಥಮಿಕ ಪ್ರಯೋಗಾಲಯ ಹಾಗೂ ರೆಫರಲ್ ಆಹಾರ ಪ್ರಯೋಗಾಲಯಗಳೆರಡೂ ಈ ನೀರಿನಲ್ಲಿ ಬ್ಯಾಕ್ಟೀರಿಯಾ ಇರುವುದನ್ನ ದೃಢಪಡಿಸಿವೆ. ಇದರ ಬೆನ್ನಲ್ಲೇ, ಎಫ್ಎಸ್ಎಸ್ಎಐ ಕಳೆದ ಆಗಸ್ಟ್ 12, 2026ರಂದು ಈ ನಿರ್ದಿಷ್ಟ ಬ್ಯಾಚ್ನ ಮಾರಾಟವನ್ನ ನಿಷೇಧಿಸಿತ್ತು. ಇದೀಗ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಗಾಗಿ ಕಂಪನಿಯ ವಿರುದ್ಧ ಕಾನೂನು ಕ್ರಮಕ್ಕೆ ಪ್ರಾಧಿಕಾರ ಅನುಮೋದನೆ ನೀಡಿದೆ.
ವಾರದೊಳಗೆ ಎರಡನೇ ಪ್ರಕರಣ: ಬಿಸ್ಲೆರಿ ಪ್ರಕರಣ ಏನಾಗಿತ್ತು? ಇದಕ್ಕೂ ಮುನ್ನ ಕಳೆದ ಭಾನುವಾರವಷ್ಟೇ ಗೋವಾದಲ್ಲಿ ಎಫ್ಎಸ್ಎಸ್ಎಐ ಕಾನೂನು ಕ್ರಮಕ್ಕೆ ಅನುಮತಿ ನೀಡಿತ್ತು. ಗೋವಾ ಘಟಕದ ಮಾದರಿಯಲ್ಲಿ (ಬ್ಯಾಚ್ GO 270) ನಿಗದಿತ ಮಿತಿಗಿಂತ ಹೆಚ್ಚಿನ ಬ್ರೋಮೇಟ್ ಅಂದರೆ ಪ್ರತಿ ಲೀಟರ್ಗೆ 10 ಮೈಕ್ರೋಗ್ರಾಂ ಮಿತಿಗೆ ಬದಲಾಗಿ 12 ಮೈಕ್ರೋಗ್ರಾಂ ಪತ್ತೆಯಾಗಿತ್ತು. ಕಂಪನಿಯ ಮೇಲ್ಮನವಿ ಮೇರೆಗೆ ರೆಫರಲ್ ಲ್ಯಾಬ್ನಲ್ಲಿ ಮರುಪರೀಕ್ಷೆ ನಡೆಸಿದಾಗ, ಅದರಲ್ಲಿ ಪಾಲಿನ್ಯೂಕ್ಲಿಯರ್ ಅರೋಮ್ಯಾಟಿಕ್ ಹೈಡ್ರೋಕಾರ್ಬನ್ಗಳು (PAHs) ಇರುವುದು ಪತ್ತೆಯಾಗಿ ನೀರನ್ನ ಅಸುರಕ್ಷಿತ ಎಂದು ಘೋಷಿಸಲಾಗಿತ್ತು.
ಆದರೆ, ಈ ಆರೋಪಗಳ ಕುರಿತು ಸ್ಪಷ್ಟನೆ ನೀಡಿರುವ ಬಿಸ್ಲೆರಿ, “ನಮ್ಮ ಪ್ಯಾಕೇಜ್ಡ್ ಕುಡಿಯುವ ನೀರು ಸೇವನೆಗೆ ಸಂಪೂರ್ಣ ಸುರಕ್ಷಿತವಾಗಿದೆ. ನಾವು 10 ಹಂತದ ಉತ್ಪಾದನಾ ಪ್ರಕ್ರಿಯೆಯಲ್ಲಿ 90ಕ್ಕೂ ಹೆಚ್ಚು ಕಠಿಣ ಗುಣಮಟ್ಟದ ಪರೀಕ್ಷೆಗಳನ್ನ ನಡೆಸುತ್ತೇವೆ. ನಿಯಂತ್ರಕ ಪ್ರಕ್ರಿಯೆಯ ಮೂಲಕ ಈ ಸಮಸ್ಯೆ ಬಗೆಹರಿಸಲು ಎಫ್ಎಸ್ಎಸ್ಎಐಗೆ ಸಹಕರಿಸುತ್ತೇವೆ” ಎಂದು ತಿಳಿಸಿದೆ.
ದೇಶಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರು ತಪಾಸಣೆ ಚುರುಕು!

ಭಾರತದಲ್ಲಿ 3.6 ಬಿಲಿಯನ್ ಡಾಲರ್ ಮೌಲ್ಯದ ಪ್ಯಾಕೇಜ್ಡ್ ಕುಡಿಯುವ ನೀರು ಮಾರುಕಟ್ಟೆಯಲ್ಲಿ ಬಿಸ್ಲೆರಿ, ಪೆಪ್ಸಿಕೊದ ಅಕ್ವಾಫಿನಾ ಹಾಗೂ ಕೋಕಾ-ಕೋಲಾದ ಕಿನ್ಲೆ ಪ್ರಮುಖ ಕಂಪನಿಗಳಾಗಿವೆ. ಈ ಘಟನೆಗಳ ಬೆನ್ನಲ್ಲೇ ಎಫ್ಎಸ್ಎಸ್ಎಐ ದೇಶಾದ್ಯಂತ ಎಲ್ಲಾ ಪ್ರಮುಖ ಬ್ರ್ಯಾಂಡ್ಗಳ ನೀರಿನ ಮಾದರಿಗಳ ತಪಾಸಣೆಯನ್ನ ತೀವ್ರಗೊಳಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಎಫ್ಎಸ್ಎಸ್ಎಐ ಸಿಇಒ ರಜಿತ್ ಪುನ್ಹಾನಿ, “ದೇಶಾದ್ಯಂತ ಪ್ಯಾಕೇಜ್ಡ್ ನೀರಿನ ಮಾದರಿಗಳನ್ನ ಸಂಗ್ರಹಿಸಲಾಗುತ್ತಿದ್ದು, ಒಂದೆರಡು ತಿಂಗಳಲ್ಲಿ ಪ್ರಯೋಗಾಲಯದ ಪರೀಕ್ಷೆ ಪೂರ್ಣಗೊಳ್ಳಲಿದೆ. ನಮ್ಮ ಈ ಕ್ರಮದ ಉದ್ದೇಶ ಜನರಲ್ಲಿ ಆತಂಕ ಮೂಡಿಸುವುದಲ್ಲ, ಬದಲಾಗಿ ಕಂಪನಿಗಳು ಗುಣಮಟ್ಟದ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡುವುದು” ಎಂದು ಸ್ಪಷ್ಟಪಡಿಸಿದ್ದಾರೆ.
