ಇಬ್ಬರು ಪರಸ್ಪರ ಪ್ರೀತಿಸಿದ್ದು, ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗಿ ಇನ್ನೇನು ಸಂಸಾರ ಸಾಗಿಸಬೇಕೆನ್ನುವಷ್ಟರಲ್ಲೇ ವಿಧಿ ಬಿಟ್ಟಿಲ್ಲ. ಹೌದು…ಮದುವೆಯ ಸಂಭ್ರಮ ಮಾಸುವ ಮುನ್ನವೇ ವಿಧಿಯ ಕ್ರೂರ ಆಟಕ್ಕೆ ನವದಂಪತಿ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮದುವೆಯಾಗ ಕೇವಲ 45 ದಿನದಲ್ಲೇ ಇಬ್ಬರು ದುರಂತ ಅಂತ್ಯಕಂಡಿದ್ದಾರೆ.
ವಿಧಿಯ ಕ್ರೂರ ಆಟಕ್ಕೆ ನವದಂಪತಿ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಅಪಘಾತದಲ್ಲಿ ಶರಾವತಿ ನಗರದ ನಿವಾಸಿಗಳಾದ ಜಿ. ಕಿರಣ್ (28) ಮತ್ತು ಅವರ ಪತ್ನಿ ಸೌಮ್ಯ (22) ಮೃತಪಟ್ಟಿದ್ದಾರೆ. ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಅಲ್ಲದೇ ಹೊಸ ಬದುಕಿನ ಕನಸು ಕಂಡಿದ್ದ ನವದಂಪತಿಯ ದುರಂತ ಸಾವು ಎರಡು ಕುಟುಂಬಗಳ ಬದುಕಿನಲ್ಲಿ ಎಂದಿಗೂ ಮರೆಯಲಾಗದ ನೋವನ್ನು ಉಳಿಸಿದೆ.




ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕಿರಣ್, ಶನಿವಾರ ರಾತ್ರಿ ಪತ್ನಿ ಸೌಮ್ಯ ಅವರೊಂದಿಗೆ ಸ್ಕೂಟಿಯಲ್ಲಿ ಶರಾವತಿ ನಗರದ ಮನೆಯಿಂದ ಗೋವಿಂದಪುರದಲ್ಲಿರುವ ಸೌಮ್ಯ ಅವರ ತವರು ಮನೆಗೆ ತೆರಳುತ್ತಿದ್ದರು. ಈ ವೇಳೆ ಸಾಗರ ರಸ್ತೆ ಸಮೀಪದ ರಿಂಗ್ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ದಂಪತಿ ರಸ್ತೆಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗಳ ತೀವ್ರತೆಯಿಂದಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮದುವೆಯಾಗಿ ಕೇವಲ 45 ದಿನಗಳಷ್ಟೇ ಕಳೆದಿದ್ದರಿಂದ ಎರಡೂ ಕುಟುಂಬಗಳಲ್ಲಿ ಸಂತಸದ ವಾತಾವರಣವಿತ್ತು. ಆದರೆ, ದಿಢೀರ್ ಸಂಭವಿಸಿದ ಅಪಘಾತದ ಸುದ್ದಿ ಕುಟುಂಬಸ್ಥರನ್ನು ಆಘಾತಕ್ಕೀಡು ಮಾಡಿದೆ. ಸ್ಥಳಕ್ಕೆ ಧಾವಿಸಿದ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಕೈಹಿಡಿದು ನೂರು ಕಾಲ ಬದುಕಬೇಕಿದ್ದ ಮಕ್ಕಳು ಹೀಗೆ ಅಕಾಲಿಕವಾಗಿ ಅಗಲಿರುವುದನ್ನು ಕುಟುಂಬಸ್ಥರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
ಪ್ರೀತಿ ಮದುವೆಯಾಗಿದ್ದರಿಂದ ಒಟ್ಟಿಗೆ ಅಂತ್ಯಕ್ರಿಯೆ ನಡೆಸಲು ಕಿರಣ್ ಕುಟುಂಬಸ್ಥರು ಮುಂದಾಗಿದ್ದರು. ಆದ್ರೆ, ಸೌಮ್ಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದು, ಸೌಮ್ಯ ಮೃತದೇಹ ತಮ್ಮ ಮನೆಗೆ ಕೊಂಡೊಯ್ದಿದ್ದಾರೆ. ಪ್ರೀತಿಸಿ ಮದುವೆಯಾಗಿ ಸಾವಿನಲ್ಲಿ ಒಂದಾದರೂ ಅಂತ್ಯಕ್ರಿಯೇ ಮಾತ್ರ ಪ್ರತ್ಯೇಕವಾಗಿ ನಡೆದಿದೆ.
