ಎಕ್ಸೆಲ್ ಟೆಕ್ನೋ ಸ್ಕೂಲ್ನಲ್ಲಿ ಪ್ರಾಥಮಿಕ ಶಾಲಾ ಕ್ರೀಡಾಕೂಟ ಹಾಗೂ ಮಕ್ಕಳ ದಿನಾಚರಣೆ ಸಂಭ್ರಮ
ವೇಣೂರು: ತರಗತಿ ಕೋಣೆಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆ ನಡೆದರೆ, ಅವರ ದೈಹಿಕ ಬೆಳವಣಿಗೆ ಆಟದ ಮೈದಾನದಲ್ಲಿ ಸಾಕಾರಗೊಳ್ಳುತ್ತದೆ. ಪರಸ್ಪರ ಸೌಹಾರ್ದತೆಯೊಂದಿಗೆ ಸಾಗುವ ಕ್ರೀಡೆಗಳು ವಿದ್ಯಾರ್ಥಿಗಳಿಗೆ ಉತ್ತಮ ದೈಹಿಕ ಕ್ಷಮತೆಯನ್ನು ಒದಗಿಸುತ್ತವೆ” ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಅಭಿಪ್ರಾಯಪಟ್ಟರು.
ಇಲ್ಲಿನ ಎಕ್ಸೆಲ್ ಟೆಕ್ನೋ ಸ್ಕೂಲ್ನಲ್ಲಿ ನ.14ರಂದು ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಂದ ಕ್ರೀಡಾ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ವಿಶೇಷ ಆಚರಣೆ: ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲಾ ಅಸೆಂಬ್ಲಿಯನ್ನು ಶಿಕ್ಷಕರೇ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ಅಲ್ಲದೆ, ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕ ವೃಂದದವರು ಪುಷ್ಪಾರ್ಚನೆಯೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು. ಸಭಾ ಕಾರ್ಯಕ್ರಮದ ಬಳಿಕ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟ ಹಾಗೂ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಬೆಂಕಿ ರಹಿತ ಅಡುಗೆ ಸ್ಪರ್ಧೆಗಳು ಯಶಸ್ವಿಯಾಗಿ ಜರುಗಿದವು.
ವೇದಿಕೆಯಲ್ಲಿ ಎಕ್ಸೆಲ್ ಟೆಕ್ನೋ ಸ್ಕೂಲ್ನ ಮುಖ್ಯ ಶಿಕ್ಷಕಿ ವಾಣಿ, ಉಪ ಮುಖ್ಯ ಶಿಕ್ಷಕಿ ಕಾವ್ಯಶ್ರೀ ಎನ್., ಎಕ್ಸೆಲ್ ವಿದ್ಯಾ ಸಂಸ್ಥೆಯ ಶಿಕ್ಷಣ ಸಂಯೋಜಕಿ ನಿಶಾ ಹಾಗೂ ಲೆಕ್ಕ ಪರಿಶೋಧನಾ ವಿಭಾಗದ ಮುಖ್ಯಸ್ಥೆ ಶ್ರುತಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸಾನ್ವಿ, ಅನ್ವಿತಾ ಮತ್ತು ರಶ್ಮಿತಾ ದೇವಾಡಿಗ ಪ್ರಾರ್ಥಿಸಿದರು. ಶಿಕ್ಷಕಿ ಲತಾಶ್ರೀ ಸ್ವಾಗತಿಸಿ, ಕ್ರೀಡಾ ಮಂತ್ರಿ ಅನ್ವೇಶ್ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕಿ ಸುಷ್ಮಾ ಜೈನ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಪೂಜಿತಾ ಬಿ.ಕೆ. ವಂದಿಸಿದರು.




