ಮರೋಡಿ: ನೊಂದವರ ನೋವಿಗೆ ಸ್ಪಂದಿಸುತ್ತಾ, ಸದಾ ಮುಖದಲ್ಲಿ ಮಂದಹಾಸ ಚೆಲ್ಲುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದ ಜೀವವೊಂದು ಇಂದು ಮೌನವಾಗಿದೆ. ಬದುಕಿನ ನೂರಾರು ಕನಸುಗಳನ್ನು ಹೊತ್ತು, ಸುತ್ತಮುತ್ತಲಿನ ಜನರ ಪ್ರೀತಿಗೆ ಪಾತ್ರರಾಗಿದ್ದ ಮರೋಡಿ ಗ್ರಾಮ ಪಂಚಾಯತ್ನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ದಿವ್ಯ ಎನ್. (33) ಅವರು ನವೆಂಬರ್ 12ರ ರಾತ್ರಿ ಹಠಾತ್ತನೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರ ಈ ಹಠಾತ್ ಅಗಲಿಕೆ ಕುಟುಂಬ ವರ್ಗಕ್ಕೆ ಮಾತ್ರವಲ್ಲದೆ, ಇಡೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತೀವ್ರ ಶೋಕ ಮೂಡಿಸಿದೆ.
ಸರಳತೆ, ಸಾಧು ಸ್ವಭಾವ ಹಾಗೂ ಮೃದು ಭಾಷೆ ದಿವ್ಯ ಅವರ ಒಡನಾಡಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿತ್ತು. ಪಂಚಾಯತ್ ವ್ಯಾಪ್ತಿಯಲ್ಲಿ ತಮ್ಮ ಜವಾಬ್ದಾರಿಯನ್ನು ಕೇವಲ ಕರ್ತವ್ಯವೆಂದು ಭಾವಿಸದೆ, ಅಚಲ ಬದ್ಧತೆಯಿಂದ ಸೇವೆ ಸಲ್ಲಿಸುತ್ತಾ ಬಂದಿದ್ದ ಅವರು, ಸಾರ್ವಜನಿಕರ ಹಾಗೂ ಸಹೋದ್ಯೋಗಿಗಳ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಯಾರೇ ಬಂದರೂ ಅಕ್ಕರೆಯಿಂದ ಮಾತನಾಡಿಸುತ್ತಿದ್ದ ಅವರ ನಗುಮುಖದ ಧ್ವನಿ ಇಂದು ಸ್ತಬ್ಧವಾಗಿರುವುದು ಎಲ್ಲರ ಕಣ್ಣಂಚಿನಲ್ಲಿ ನೀರು ತರಿಸಿದೆ.
ಮೃತರು ತಮ್ಮ ತಂದೆ ನೋಣಯ್ಯ, ತಾಯಿ ಮೀನಾಕ್ಷಿ, ಸಹೋದರಿ ಭವ್ಯ, ಸಹೋದರ ರೋಹನ್ ಹಾಗೂ ಅಗಣಿತ ಬಂಧು-ಬಳಗವನ್ನು ಅಗಲಿದ್ದಾರೆ.




ಅಗಲಿಕೆಯ ನೋವಿನಲ್ಲಿರುವ ಕುಟುಂಬಕ್ಕೆ ಆ ದೇವರೇ ಧೈರ್ಯ ತುಂಬಲಿ ಹಾಗೂ ದಿವ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗ್ರಾಮಸ್ಥರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ


