ಬೆಂಗಳೂರು, ನ.6: ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ರುಬ್ಬುಗುಂಡಿನಿಂದ ಹೊಡೆದು ಕೊಂದಿದ್ದಾನೆ. ಬಳಿಕ ಮೃತದೇಹಗಳನ್ನು ನಂದಿಬೆಟ್ಟ ಹಾಗೂ ಚಾರ್ಮಾಡಿ ಘಾಟ್ನಲ್ಲಿ ಎಸೆದಿದ್ದು, ಈ ಹಿಂದೆ ಸರಗಳ್ಳತನದಲ್ಲೂ ಭಾಗಿಯಾಗಿದ್ದ ಆರೋಪಿಗೆ ಮರಣದಂಡನೆ ನೀಡುವಂತೆ ಸಂಬಂಧಿಕರು ಆಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಇಂದುಶೇಖರ್ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದು, ಎರಡು ದಿನಗಳ ಹಿಂದೆ ನಡೆದಿದ್ದ ಹತ್ಯಾಕಾಂಡ ತಡವಾಗಿ ಬೆಳಕಿಗೆ ಬಂದಿದೆ.



ಏಳು ವರ್ಷದ ಮಗುವನ್ನೂ ಕೊಂದ ಹಂತಕ!
ಶ್ರೀರಾಮಪುರದ ರೂಪವತಿ, ಆಕೆಯ ಮಗಳು ಸುನೀತಾ, ಪುತ್ರರಾದ ಶಿವಕುಮಾರ್ ಮತ್ತು ಶಂಕರ್, ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿ ಹಾಗೂ ಏಳು ವರ್ಷದ ಮೊಮ್ಮಗ ಪುನೀತ್ ಮೃತಪಟ್ಟ ದುರ್ದೈವಿಗಳು. ಸುಮಾರು 20 ವರ್ಷಗಳ ಹಿಂದೆ ಸುನೀತಾಳನ್ನು ವಿವಾಹವಾಗಿದ್ದ ಇಂದುಶೇಖರ್, ಪತ್ನಿ ತನ್ನ ತವರು ಮನೆಯವರೊಂದಿಗಿನ ಸಂಬಂಧವನ್ನು ಮುಂದುವರಿಸಿದ್ದಕ್ಕೆ ಅಸಮಾಧಾನ ಹೊಂದಿದ್ದ . ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಪತ್ನಿಯ ತಾಯಿ ಮತ್ತು ಸಹೋದರರು ಆಕೆಯ ಪರವಾಗಿ ನಿಲ್ಲುತ್ತಿದ್ದುದೂ ಆರೋಪಿಗೆ ಕೋಪ ತರಿಸಿತ್ತು.


ಪೂರ್ವಯೋಜಿತವಾಗಿ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿ, ಮೊದಲು ಪತ್ನಿಯನ್ನು ತನ್ನ ಮನೆಯಲ್ಲೇ ರುಬ್ಬುಗುಂಡಿನಿಂದ ಹೊಡೆದು ಕೊಂದಿದ್ದಾನೆ. ಬಳಿಕ ಆಕೆಯ ಕುಟುಂಬದವರಿಗೆ ಅನುಮಾನ ಬಾರದಂತೆ ಸುನೀತಾ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ನಂತರ ಮದ್ಯಪಾನದ ನೆಪದಲ್ಲಿ ಬಾಮೈದರಾದ ಶಿವಕುಮಾರ್ ಮತ್ತು ಶಂಕರ್, ಅವರ ಪತ್ನಿಯರಾದ ನಳಿನಿ, ದಿವ್ಯಾ, ಅತ್ತೆ ರೂಪವತಿ ಹಾಗೂ ಬಾಲಕ ಪುನೀತ್ನನ್ನು ಸೇರಿದಂತೆ ಕಳೆದ 15-20 ದಿನಗಳಿಂದ ಒಬ್ಬೊಬ್ಬರನ್ನೇ ಕರೆಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಾಪತ್ತೆ ಪ್ರಕರಣದಿಂದ ಬಯಲಾಯ್ತು ಸತ್ಯ!
ನಳಿನಿ ನಿಗೂಢವಾಗಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ತಾಯಿ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, ಇಂದುಶೇಖರ್ನನ್ನು ವಿಚಾರಣೆಗೊಳಪಡಿಸಿದಾಗ ಆತ ನೀಡಿದ ಗೊಂದಲಕಾರಿ ಹೇಳಿಕೆಗಳು ಅನುಮಾನಕ್ಕೆ ಕಾರಣವಾಗಿದ್ದವು. ಬಳಿಕ ಆತನ ಮನೆಯ ಪರಿಶೀಲನೆ ನಡೆಸಿದಾಗ ಹತ್ಯೆಗೆ ಸಂಬಂಧಿಸಿದ ಸುಳಿವುಗಳು ಲಭ್ಯವಾಗಿವೆ. ತೀವ್ರ ವಿಚಾರಣೆ ವೇಳೆ ಆರೋಪಿ ಕೃತ್ಯ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳಿಂದ ತೀವ್ರ ತನಿಖೆ
ಈ ಸಾಮೂಹಿಕ ಹತ್ಯಾಕಾಂಡದ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ರಾಜಾಜಿನಗರ ಪೊಲೀಸ್ ಠಾಣೆಗೆ ದೌಡಾಯಿಸಿದ್ದಾರೆ. ಪಶ್ಚಿಮ ವಿಭಾಗದ ಜಂಟಿ ಆಯುಕ್ತ ವಂಶಿಕೃಷ್ಣ ಹಾಗೂ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಠಾಣೆಯಲ್ಲೇ ಮೊಕ್ಕಾಂ ಹೂಡಿ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಗಂಭೀರತೆ ಪರಿಗಣಿಸಿ ಡಿಸಿಪಿ ನೇತೃತ್ವದಲ್ಲಿ ಮೂವರು ಎಸಿಪಿಗಳ ವಿಶೇಷ ತಂಡವನ್ನು ರಚಿಸಲಾಗಿದೆ. ನಂದಿಬೆಟ್ಟದ ಸುತ್ತಮುತ್ತ ಎಸೆಯಲಾದ ಉಳಿದ ಮೃತದೇಹಗಳ ಪತ್ತೆಗೆ ಹಾಗೂ ಸಾಕ್ಷ್ಯ ಸಂಗ್ರಹಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
