ವೇಣೂರು: ವಿಧಿ ಕೆಲವೊಮ್ಮೆ ಹೆಣೆಯುವ ವಿಪರ್ಯಾಸಗಳು ಅತ್ಯಂತ ಕ್ರೂರವಾಗಿರುತ್ತವೆ. ಬೆಳಗಿನ ಸೂರ್ಯೋದಯದೊಂದಿಗೆ ಹೊಸ ದಿನದ ನಿರೀಕ್ಷೆಯಲ್ಲಿ, ಸಂಸಾರದ ನಗುವಿನ ನಡುವೆ ಹೆಜ್ಜೆ ಇಡುವ ಜೀವವೊಂದು ಕ್ಷಣಮಾತ್ರದಲ್ಲಿ ಮರೆಯಾಗುತ್ತದೆ ಎಂದರೆ ಅದನ್ನು ನಂಬುವುದೂ ಕಷ್ಟ!
ಪ್ರೀತಿಯಿಂದ ಸಾಕಿ ಸಲಹಬೇಕಾದ ತಾಯಿಯೊಬ್ಬಳು ತನ್ನ ಇಬ್ಬರು ಕಂದಮ್ಮಗಳನ್ನು ರೆಡಿಮಾಡಿ ಕೈ ಹಿಡಿದು, ಒಬ್ಬನನ್ನು ಆಟೋ ರಿಕ್ಷಾದಲ್ಲಿ ಶಿಶು ಮಂದಿರಕ್ಕೆ ಹಾಗೂ ಮತ್ತೊಬ್ಬನನ್ನು ವೇಣೂರು ಖಾಸಗಿ ಶಾಲಾ ಬಸ್ಗೆ ಕಳುಹಿಸಿಕೊಟ್ಟಿದ್ದು, ಅದೇ ಆ ಮಕ್ಕಳೊಂದಿಗೆ ಆ ತಾಯಿ ಕಳೆದ ಕೊನೆಯ ಕ್ಷಣಗಳಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ವೇಣೂರಿನ ಪೂರ್ಣಿಮಾ ಅವರ ಈ ಹಠಾತ್ ನಿರ್ಗಮನವು ಕೇವಲ ಒಂದು ಜೀವದ ಅಂತ್ಯವಲ್ಲ; ಎರಡು ಹಸಿಗೂಸುಗಳ ಭವಿಷ್ಯದ ನೆರಳನ್ನು ಕಸಿದುಕೊಂಡ ಹೃದಯವಿದ್ರಾವಕ ದುರಂತವೇ ಸರಿ.
ಪಡ್ಡಂದಡ್ಕ ಕೆದ್ಯೊಟ್ಟು ನಿವಾಸಿ ರಾಜೇಶ್ ಪೂಜಾರಿ ಅವರ ಪತ್ನಿ ಶ್ರೀಮತಿ ಪೂರ್ಣಿಮಾ (30) ಮೃತಪಟ್ಟ ದುರ್ದೈವಿ.



ಸಂಭವಿಸಿದ್ದೇನು?
ನವೆಂಬರ್ ೩ರಂದು ಬೆಳಿಗ್ಗೆ ಪೂರ್ಣಿಮಾ ಅವರಿಗೆ ಸಣ್ಣದಾಗಿ ತಲೆನೋವು ಕಾಣಿಸಿಕೊಂಡಿತ್ತು. ಎಂದಿನಂತೆ ಬೆಳಿಗ್ಗೆ ಎದ್ದು ತನ್ನ ಮುದ್ದಿನ ಇಬ್ಬರು ಕಂದಮ್ಮಗಳನ್ನು ಶಾಲೆಗೆ ಕಳುಹಿಸಿ, ತಲೆನೋವು ಹೆಚ್ಚಾಗಿದ್ದರಿಂದ ಚಿಕಿತ್ಸೆಗಾಗಿ ಕ್ಲಿನಿಕ್ಗೆ ತೆರಳಲು ಆಟೋ ರಿಕ್ಷಾವೊಂದನ್ನು ಗೊತ್ತು ಮಾಡಿದ್ದರು. ಆಟೋ ರಿಕ್ಷಾದ ಪ್ರಯಾಣದ ಮಧ್ಯೆ ತಲೆನೋವಿನೊಂದಿಗೆ ಹಠಾತ್ತಾಗಿ ತೀವ್ರ ಸ್ವರೂಪದ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆ ತಲುಪಲು ಇನ್ನು ಕೆಲವೇ ಕ್ಷಣಗಳು ಬಾಕಿ ಇರುವಾಗ, ವಿಧಿಯಾಟಕ್ಕೆ ಬಲಿಯಾದ ಪೂರ್ಣಿಮಾ ಅವರ ಪ್ರಾಣಪಕ್ಷಿ ಮಾರ್ಗಮಧ್ಯದಲ್ಲೇ ಹಾರಿಹೋಗಿದೆ.


ತಬ್ಬಲಿಯಾದ ಮಕ್ಕಳು, ಕುಟುಂಬಸ್ಥರ ಆಕ್ರಂದನ!
ಮೃತ ಪೂರ್ಣಿಮಾ ಅವರ ಪತಿ ರಾಜೇಶ್ ಪೂಜಾರಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಇವರಿಗೆ ಇಬ್ಬರು ಪುಟ್ಟ ಗಂಡು ಮಕ್ಕಳಿದ್ದಾರೆ. ವಿದೇಶದಲ್ಲಿದ್ದ ಗಂಡನಿಗೆ ವಿಷಯ ತಿಳಿದು ಆಘಾತದಿಂದ ಚೇತರಿಸಿಕೊಳ್ಳುವಷ್ಟರಲ್ಲಿಯೇ ನಡೆಯಬಾರದ ದುರಂತ ನಡೆದುಹೋಗಿದೆ. ಅಮ್ಮನ ಮಡಿಲಲ್ಲಿ ನಲಿಯಬೇಕಿದ್ದ ಇಬ್ಬರು ಕಂದಮ್ಮಗಳು ಈಗ ತಾಯಿಯಿಲ್ಲದೆ ತಬ್ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯರು ಹಾಗೂ ಬಂಧು ಮಿತ್ರರು ಕಂಬನಿ ಮಿಡಿದಿದ್ದಾರೆ.
ಆಸ್ಪತ್ರೆಯ ಬಾಗಿಲು ತಲುಪಿದ್ದರೆ ಬಹುಶಃ ಜೀವ ಉಳಿಯುತ್ತಿತ್ತೇನೋ… ಆದರೆ ಕಾಲನ ಕರೆಗೆ ವಿಧಿ ಕೊಟ್ಟ ಸಮಯ ಸಾಲಲಿಲ್ಲ. ಊರವರ ಪ್ರೀತಿಯ ಪೂರ್ಣಿಮಾ ನಮ್ಮೆಲ್ಲರನ್ನು ಅಗಲಿದ್ದಾರೆ, ಆದರೆ ಅವರು ಬಿಟ್ಟು ಹೋದ ಮೌನ ಮತ್ತು ಈ ಕಂದಮ್ಮಗಳ ತಬ್ಬಲಿ ಪರಿಯು ಮನೆ ಪರಿಸರದ ಪ್ರತಿಯೊಬ್ಬರ ಕಣ್ಣಲ್ಲೂ ಎಂದಿಗೂ ಆರದ ಕಣ್ಣೀರನ್ನು ಬಿಟ್ಟುಹೋಗಿದೆ.
ಎಲ್ಲರೊಂದಿಗೆ ನಗುನಗುತ್ತಾ, ಪ್ರೀತಿಯಿಂದ ದಿನ ಕಳೆಯುತ್ತಿದ್ದ ಪೂರ್ಣಿಮಾ ಅವರ ಈ ಹಠಾತ್ ಅಗಲಿಕೆಯನ್ನು ಪಡ್ಡಂದಡ್ಕ ಹಾಗೂ ವೇಣೂರು ಸುತ್ತಮುತ್ತಲಿನ ಜನತೆಗೆ ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿದೇಶದಲ್ಲಿದ್ದು ಕುಟುಂಬಕ್ಕಾಗಿ ದುಡಿಯುತ್ತಿದ್ದ ಗಂಡನಿಗೆ ಏನಾಯಿತು ಎಂದು ಚೇತರಿಸಿಕೊಳ್ಳುವಷ್ಟರಲ್ಲಿಯೇ ಜೀವನದ ದೊಡ್ಡ ಆಸರೆಯೇ ಕೈತಪ್ಪಿ ಹೋಗಿತ್ತು. ಇನ್ನು ಆ ಮನೆ ಅಂಗಳದಲ್ಲಿ ಮಗುವಿನ ತೊದಲ ನುಡಿಗಳಿಗೆ ಉತ್ತರ ನೀಡಲು ತಾಯಿ ಇಲ್ಲ; ಅಮ್ಮ ಎಂದಾಗ ಓಡಿ ಬಂದು ಅಪ್ಪಿಕೊಳ್ಳುವ ಬೆಚ್ಚನೆಯ ಅಪ್ಪುಗೆಯೂ ಇಲ್ಲ. ಅಮ್ಮ ಇನ್ನೆಂದಿಗೂ ಹಿಂತಿರುಗಿ ಬರುವುದಿಲ್ಲ ಎಂಬ ಕಹಿ ಸತ್ಯ ಅರಿಯದ ಆ ಇಬ್ಬರು ಪುಟ್ಟ ಕಂದಮ್ಮಗಳು ಮುದ್ದಾದ ಕಣ್ಣುಗಳಿಂದ ಬಾಗಿಲನ್ನೇ ನೋಡುತ್ತಿರುವುದು ಕಂಡವರ ಎದೆಯನ್ನು ಹಿಂಡುವಂತಿದೆ!!
