ಬೆಂಗಳೂರು, ನ. 5: ದೀಪಾವಳಿ ಹಬ್ಬದ ಹೊತ್ತಲ್ಲೇ ರಾಜ್ಯದ ಜನರಿಗೆ ಬೆಲೆ ಏರಿಕೆಯ ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆಯಿಂದ ಗ್ರಾಹಕರು ಬೇಸರಗೊಂಡಿರುವ ಬೆನ್ನಲ್ಲೇ, ಇದೀಗ ನಂದಿನಿ ಬ್ರ್ಯಾಂಡ್ನ ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ಉತ್ಪನ್ನಗಳ ಬೆಲೆಯನ್ನೂ KMF ಹೆಚ್ಚಿಸಿದೆ. ಪರಿಷ್ಕೃತ ದರಗಳು ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ.


ಕೆಎಂಎಫ್ ಪ್ರಕಟಿಸಿರುವ ಪರಿಷ್ಕೃತ ದರಪಟ್ಟಿಯಂತೆ ಹಲವು ಉತ್ಪನ್ನಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಪ್ರಮುಖವಾಗಿ ನಂದಿನಿ ತುಪ್ಪದ ಬೆಲೆ ಲೀಟರ್ಗೆ ₹100 ಹೆಚ್ಚಳವಾಗಿದೆ. ಬೆಣ್ಣೆ ಹಾಗೂ ಪನ್ನೀರ್ ದರಗಳಲ್ಲೂ ಏರಿಕೆ ಕಂಡುಬಂದಿದೆ.

ಬೇಕರಿ, ಹೋಟೆಲ್ ತಿಂಡಿ-ಸಿಹಿನಿಸುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ
ಹಾಲಿನ ದರ ಹೆಚ್ಚಳವಾದ ಬಳಿಕ ಹಲವು ಹೋಟೆಲ್ಗಳು ಕಾಫಿ ಮತ್ತು ಟೀ ಬೆಲೆಯನ್ನು ₹5ರವರೆಗೆ ಹೆಚ್ಚಳ ಮಾಡಿದ್ದವು. ಇದೀಗ ತುಪ್ಪ, ಬೆಣ್ಣೆ ಮತ್ತು ಪನ್ನೀರ್ ದರಗಳೂ ಏರಿಕೆಯಾಗಿವೆ. ಈ ಉತ್ಪನ್ನಗಳನ್ನು ಹೋಟೆಲ್, ಬೇಕರಿ ಹಾಗೂ ಸಿಹಿ ತಿಂಡಿ ಮಳಿಗೆಗಳಲ್ಲಿ ವ್ಯಾಪಕವಾಗಿ ಬಳಸಲಾಗುವುದರಿಂದ ತಿಂಡಿ-ತಿನಿಸು ಮತ್ತು ಸಿಹಿ ಪದಾರ್ಥಗಳ ಬೆಲೆ ಕೂಡ ಹೆಚ್ಚಳವಾಗುವ ಸಾಧ್ಯತೆ ಇದೆ.


ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಹಿ ತಿಂಡಿಗಳು ಮತ್ತು ವಿವಿಧ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗುವ ಹೊತ್ತಲ್ಲೇ ನಂದಿನಿ ಉತ್ಪನ್ನಗಳ ದರ ಏರಿಕೆಯಾಗಿರುವುದು ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಆಗುವ ಆತಂಕ ಮೂಡಿಸಿದೆ.
