ವಾಷಿಂಗ್ಟನ್, ಅ.28: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೂಲಸೌಕರ್ಯಗಳ ಮೇಲೆ ಬೃಹತ್ ಬಂಡವಾಳ ಹೂಡಿಕೆ ಮಾಡುತ್ತಿರುವ ಟೆಕ್ ದೈತ್ಯ ಮೈಕ್ರೋಸಾಫ್ಟ್ ವೆಚ್ಚ ನಿಯಂತ್ರಣದ ಭಾಗವಾಗಿ ಭಾರತ, ಅಮೆರಿಕ, ಬ್ರಿಟನ್ ಹಾಗೂ ಕೆನಡಾದಲ್ಲಿನ ತನ್ನ ಅರ್ಹ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನ ಆಫರ್ ಪ್ರಕಟಿಸಿದೆ.



ಈ ಯೋಜನೆಯು ಸಂಸ್ಥೆಯ ಜಾಗತಿಕ ಕಾರ್ಯಪಡೆಯ ಶೇ.25ಕ್ಕೂ ಹೆಚ್ಚು, ಅಂದರೆ ಸುಮಾರು 60,000 ಉದ್ಯೋಗಿಗಳನ್ನು ಒಳಗೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಭಾರತ, ಅಮೆರಿಕ, ಯುನೈಟೆಡ್ ಕಿಂಗ್ಡಮ್ (UK) ಹಾಗೂ ಕೆನಡಾದಲ್ಲಿ ಲೆವೆಲ್ 70 ಮತ್ತು ಅದಕ್ಕಿಂತ ಕೆಳಗಿನ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಸಿಬ್ಬಂದಿಗೆ ಈ ಅವಕಾಶ ಲಭ್ಯವಿದೆ. ಎಐ ಎಕ್ಸ್ಪೀರಿಯನ್ಸಸ್, ಕೊಪೈಲಟ್, ಹಣಕಾಸು, ಮಾನವ ಸಂಪನ್ಮೂಲ, ಎಕ್ಸ್ಬಾಕ್ಸ್ ಹಾಗೂ ವಿಂಡೋಸ್ + ಡಿವೈಸಸ್ ವಿಭಾಗಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಅರ್ಜಿ ಸಲ್ಲಿಸಬಹುದು. ಮಾರ್ಕೆಟಿಂಗ್, ಕಮರ್ಷಿಯಲ್ ಬಿಸಿನೆಸ್ ಹಾಗೂ ಸೆಕ್ಯುರಿಟಿ ತಂಡಗಳನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ.
