ಮಂಗಳೂರು, ಅ.26: ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನ್ನಲ್ಲಿ ಭಾನುವಾರ ನಡೆದ ವಾರ್ಷಿಕ ‘ಪಿಲಿಕುಳ ಮತ್ಸ್ಯೋತ್ಸವ ಮತ್ತು ಮೀನು ಮೇಳ-2026’ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರೆಯಿತು. ಕೆರೆಯಿಂದ ನೇರವಾಗಿ ಹಿಡಿದ ತಾಜಾ ಮೀನುಗಳನ್ನು ಖರೀದಿಸಲು ಅಪಾರ ಸಂಖ್ಯೆಯಲ್ಲಿ ಮತ್ಸ್ಯ ಪ್ರಿಯರು ಆಗಮಿಸಿದ್ದರು.



ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ, ಮೀನುಗಾರಿಕೆ ಇಲಾಖೆ ಹಾಗೂ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ (ಕೆಎಫ್ಡಿಸಿ) ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಈ ಮೇಳವು ಮೀನುಗಾರಿಕೆಗೆ ಉತ್ತೇಜನ ನೀಡುವುದು, ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದು ಮತ್ತು ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ನೈಸರ್ಗಿಕವಾಗಿ ಬೆಳೆದ ತಾಜಾ ಮೀನುಗಳನ್ನು ತಲುಪಿಸುವ ಉದ್ದೇಶವನ್ನು ಹೊಂದಿತ್ತು.ಮೇಳದಲ್ಲಿ ಕ್ಯಾಟ್ಲಾ, ರೋಹು ಹಾಗೂ ತಿಲಾಪಿಯಾ ಮುಂತಾದ ತಾಜಾ ಮೀನುಗಳ ತಳಿಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಬೇಡಿಕೆ ವ್ಯಕ್ತವಾಯಿತು. ಪಿಲಿಕುಳ ಕೆರೆಯಲ್ಲಿ ಬೆಳೆದ ಮೀನುಗಳನ್ನು ನೇರವಾಗಿ ಖರೀದಿಸುವ ಅವಕಾಶವು ನಿರಂತರ ಗ್ರಾಹಕರನ್ನು ಹಾಗೂ ಹೊಸ ಸಂದರ್ಶಕರನ್ನು ಆಕರ್ಷಿಸಿತು. ಈ ವಾರ್ಷಿಕ ಮೇಳವು ಮೀನು ಪ್ರಿಯರು ಕಾತರದಿಂದ ಕಾಯುವ ಪ್ರಮುಖ ಉತ್ಸವವಾಗಿ ಹೊರಹೊಮ್ಮಿದೆ.ಎಲ್ಲರಿಗೂ ಮೀನು ದೊರೆಯುವಂತಾಗಲು ಹಾಗೂ ಪಾರದರ್ಶಕ ಮಾರಾಟಕ್ಕಾಗಿ ಸಂಘಟಕರು ಟೋಕನ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಒಬ್ಬರಿಗೆ ಗರಿಷ್ಠ 5 ಕೆಜಿ ಮೀನು ಖರೀದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ವ್ಯವಸ್ಥೆಯಿಂದಾಗಿ ಹೆಚ್ಚಿನ ಜನರಿಗೆ ಮೀನು ತಲುಪಿಸಲು ಸಾಧ್ಯವಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಡಾ. ಎ. ಉಮಾನಾಥ ಕೋಟ್ಯಾನ್ ಅವರು, ಮತ್ಸ್ಯೋತ್ಸವಕ್ಕೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಪಿಲಿಕುಳ ಕೆರೆಯಿಂದ ನೇರವಾಗಿ ತಾಜಾ ಮೀನು ಖರೀದಿಸುವ ಉತ್ತಮ ಅವಕಾಶ ಇದಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳು ಮುಂದುವರಿಯಲಿವೆ ಎಂದರು.ಪಿಲಿಕುಳ ನಗರಾಭಿವೃದ್ಧಿ ಪ್ರಾಧಿಕಾರದ ಉಸ್ತುವಾರಿ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, ಕೆರೆಗೆ ನಿಯಮಿತವಾಗಿ ಮೀನು ಮರಿಗಳನ್ನು ಬಿಡಲಾಗುತ್ತದೆ ಮತ್ತು ಅವು ನೈಸರ್ಗಿಕವಾಗಿ ಬೆಳೆದ ನಂತರವೇ ಮಾರಾಟಕ್ಕಾಗಿ ಹಿಡಿಯಲಾಗುತ್ತದೆ. ಮೀನಿನ ಪೌಷ್ಟಿಕಾಂಶದ ಮಹತ್ವ ಹಾಗೂ ಮತ್ಸ್ಯೋತ್ಸವದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಆಸಕ್ತಿಯ ಕುರಿತು ಮಾತನಾಡಿದರು.ಮೇಳಕ್ಕಾಗಿ ಸಂಘಟಕರು ಒಟ್ಟು 1,500 ಕೆಜಿ ಮೀನು ಹಿಡಿಯುವ ಗುರಿ ಹೊಂದಿದ್ದು, ಅದರಲ್ಲಿ ಸುಮಾರು 1,000 ಕೆಜಿ ಮೀನುಗಳನ್ನು ಈಗಾಗಲೇ ಹಿಡಿಯಲಾಗಿತ್ತು.ಮೇಳದ ಕುರಿತು ಸಂತಸ ವ್ಯಕ್ತಪಡಿಸಿದ ಗ್ರಾಹಕರೊಬ್ಬರು, “ನಾವು ಪ್ರತಿ ವರ್ಷ ಇಲ್ಲಿಗೆ ಬರುತ್ತೇವೆ. ಈ ವರ್ಷವೂ ಮತ್ಸ್ಯೋತ್ಸವಕ್ಕೆ ಬಂದಿದ್ದೇವೆ. ಇಲ್ಲಿ ಸಿಕ್ಕ ಮೀನಿನ ಗುಣಮಟ್ಟದಿಂದ ನಮಗೆ ತುಂಬಾ ಸಂತೋಷವಾಗಿದೆ. ಅತ್ಯಂತ ತಾಜಾ ಮೀನುಗಳು ದೊರೆತಿದ್ದು, ಉತ್ತಮ ಅನುಭವ ಸಿಕ್ಕಿದೆ. ಪ್ರತಿ ವರ್ಷ ನಾವು ಈ ಮೇಳಕ್ಕಾಗಿ ಕಾಯುತ್ತೇವೆ. ಮುಂದಿನ ವರ್ಷಗಳಲ್ಲೂ ಹೀಗೆಯೇ ಮೇಳ ಆಯೋಜನೆಯಾಗಿ, ಮತ್ತಷ್ಟು ಜನರಿಗೆ ಪಿಲಿಕುಳದ ತಾಜಾ ಮೀನು ಸವಿಯುವ ಅವಕಾಶ ಸಿಗಲಿ” ಎಂದರು.ಮೀನು ಮಾರಾಟದ ಜೊತೆಗೆ ಮೇಳದಲ್ಲಿ ಸಿಹಿನೀರು ಮತ್ತು ಸಮುದ್ರದ ವಿವಿಧ ಖಾದ್ಯಗಳ ತಿನಿಸುಗಳ ಮಳಿಗೆಗಳು (ಫುಡ್ ಸ್ಟಾಲ್) ಹಾಗೂ ಮೌಲ್ಯವರ್ಧಿತ ಮೀನಿನ ಉತ್ಪನ್ನಗಳ ಪ್ರದರ್ಶನವೂ ಇತ್ತು. ಈ ಮಳಿಗೆಗಳು ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದು, ಸಂದರ್ಶಕರು ವಿವಿಧ ಬಗೆಯ ಮೀನಿನ ಖಾದ್ಯಗಳನ್ನು ಸವಿದು ಆನಂದಿಸಿದರು.ವಾರ್ಷಿಕ ಮತ್ಸ್ಯೋತ್ಸವವು ಸಾರ್ವಜನಿಕರಿಗೆ ತಾಜಾ ಮೀನು ದೊರಕಿಸಿಕೊಡುವುದಷ್ಟೇ ಅಲ್ಲದೆ, ಮೀನುಗಾರಿಕೆ ಪ್ರೋತ್ಸಾಹ, ಸ್ಥಳೀಯ ಪ್ರವಾಸೋದ್ಯಮ ಬಲವರ್ಧನೆ ಹಾಗೂ ಮೀನು ಸಾಕಣೆ ಬಗ್ಗೆ ಜಾಗೃತಿ ಮೂಡಿಸುವ ಪಿಲಿಕುಳದ ಪ್ರಯತ್ನವನ್ನು ಬಿಂಬಿಸಿತು.ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ., ಶಾಸಕ ಡಾ. ಎ. ಉಮಾಥ ಕೋಟ್ಯಾನ್, ಪಿಲಿಕುಳ ನಗರಾಭಿವೃದ್ಧಿ ಪ್ರಾಧಿಕಾರದ ಉಸ್ತುವಾರಿ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ, ಆಡಳಿತಾಧಿಕಾರಿ ಡಾ. ಅಶೋಕ್ ಕೆ.ಆರ್., ನಾಮನಿರ್ದೇಶಿತ ಸದಸ್ಯ ಶಿವರಾಮ ಮಲ್ಲಿ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಜನರಲ್ ಮ್ಯಾನೇಜರ್ ಮಹೇಶ್ ಕುಮಾರ್ ಹಾಗೂ ಉಪಸಮಿತಿ ಅಧ್ಯಕ್ಷ ಪ್ರೊ. ಜಿ. ಶ್ರೀನಿಕೇತ್ ಉಪಸ್ಥಿತರಿದ್ದರು.

