ಮಹಾರಾಷ್ಟ್ರದಲ್ಲಿ ಬರದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಸರ್ಕಾರ ಘೋಷಿಸಿರುವ ₹5,000 ಮಧ್ಯಂತರ ಬರ ಪರಿಹಾರ ಮೊತ್ತ ಸಾಲದು ಎಂದು ಅಸಮಾಧಾನಗೊಂಡ ಸೋಯಾಬೀನ್ ಬೆಳೆಗಾರರೊಬ್ಬರು, ಸ್ನೇಹಿತರಿಂದ ಸಾಲ ಪಡೆದು ₹5,000 ಹಣವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಮನಿ ಆರ್ಡರ್ ಮೂಲಕ ಕಳುಹಿಸಿ ಪ್ರತಿಭಟನೆ ನಡೆಸಿದ್ದಾರೆ.


ಬರಪೀಡಿತ ರೈತರಿಗೆ ಸರ್ಕಾರ ಘೋಷಿಸಿರುವ ₹5,000 ಮಧ್ಯಂತರ ಪರಿಹಾರ ಮೊತ್ತ ತೀರಾ ಕಡಿಮೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಸೂರಡಿ ಗ್ರಾಮದ ಸೋಯಾಬೀನ್ ಬೆಳೆಗಾರ ಚಾಂದ್ ಶೇಖ್ ಈ ರೀತಿ ಪ್ರತಿಭಟನೆ ನಡೆಸಿದ ರೈತ. ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರವು ರೈತರ ಸಂಕಷ್ಟಕ್ಕೆ ಸಾಕಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

₹3,900 ಆದಾಯ, ₹25 ಸಾವಿರ ಖರ್ಚು! ಚಾಂದ್ ಶೇಖ್ ಅವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಸೋಯಾಬೀನ್ ಬೆಳೆದಿದ್ದರು. ಕೃಷಿಗಾಗಿ ಸುಮಾರು ₹25,000 ಖರ್ಚು ಮಾಡಿದ್ದರೂ, ಕೇವಲ 60 ಕೆ.ಜಿ. ಸೋಯಾಬೀನ್ ಇಳುವರಿ ದೊರೆತಿದೆ. ಇದರಿಂದ ಅವರಿಗೆ ಸಿಕ್ಕ ಆದಾಯ ಕೇವಲ ₹3,900 ಎಂದು ತಿಳಿಸಿದ್ದಾರೆ. ಸರ್ಕಾರ ಘೋಷಿಸಿರುವ ₹5,000 ಪರಿಹಾರ ಮೊತ್ತವನ್ನೇ ಮುಖ್ಯಮಂತ್ರಿಗೆ ಕಳುಹಿಸಲು ನಿರ್ಧರಿಸಿದ ಶೇಖ್, ತಮ್ಮ ಬಳಿ ಇದ್ದ ಹಣ ಸಾಕಾಗದ ಕಾರಣ ಸ್ನೇಹಿತರಿಂದ ₹1,100 ಸಾಲ ಪಡೆದು ಮನಿ ಆರ್ಡರ್ ಕಳುಹಿಸಿರುವುದಾಗಿ ಹೇಳಿದ್ದಾರೆ.
