ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಬಳಕೆ ಎಷ್ಟು ಅಗತ್ಯವೋ, ಅಷ್ಟೇ ಅಪಾಯಕಾರಿ ಸೈಬರ್ ವಂಚನೆಗಳಿಗೂ ಕಾರಣವಾಗುತ್ತಿದೆ. ಅಪರಿಚಿತ ಸಂಖ್ಯೆಗಳಿಂದ ಬರುವ ಸ್ಪ್ಯಾಮ್ ಹಾಗೂ ವಂಚಕರ ಕರೆಗಳಿಗೆ ಶಾಶ್ವತ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಭಾರತೀಯ ದೂರಸಂಪರ್ಕ ಇಲಾಖೆ (DoT) ನೀಡಿರುವ ಹೊಸ ನಿರ್ದೇಶನದ ಪ್ರಕಾರ, ನವೆಂಬರ್ 1, 2026 ರಿಂದ ದೇಶಾದ್ಯಂತ ಎಲ್ಲಾ ಮೊಬೈಲ್ ಬಳಕೆದಾರರಿಗೆ ‘ಕಾಲರ್ ನೇಮ್ ಡಿಸ್ಪ್ಲೇ’ ಅಥವಾ ‘ಕಾಲಿಂಗ್ ನೇಮ್ ಪ್ರೆಸೆಂಟೇಶನ್’ (CNAP) ವ್ಯವಸ್ಥೆಯನ್ನ ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದೆ.

ಹೊಸ ಟ್ರಾಯ್ ನಿಯಮ ಹೇಗೆ ಕೆಲಸ ಮಾಡುತ್ತದೆ?
ಈವರೆಗೆ ನಮಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಾಗ ಕೇವಲ ಫೋನ್ ನಂಬರ್ ಮಾತ್ರ ಮೊಬೈಲ್ ಪರದೆಯ ಮೇಲೆ ಕಾಣಿಸುತ್ತಿತ್ತು. ಆದರೆ, ಈ ಹೊಸ ನಿಯಮ ಜಾರಿಗೆ ಬಂದ ಬಳಿಕ ಕೇವಲ ಸಂಖ್ಯೆ ಮಾತ್ರವಲ್ಲ, ಕರೆ ಮಾಡಿದ ವ್ಯಕ್ತಿಯ ಅಧಿಕೃತ ಹೆಸರು ಸಹ ಪರದೆಯ ಮೇಲೆ ಕಾಣಲಿದೆ. ಸಿಮ್ ಕಾರ್ಡ್ ಖರೀದಿಸುವಾಗ ಗ್ರಾಹಕರು ನೀಡಿರುವ ಕೆವೈಸಿ (KYC) ದಾಖಲೆಗಳ ಆಧಾರದ ಮೇಲೆ, ಟೆಲಿಕಾಂ ಆಪರೇಟರ್ಗಳ ಡೇಟಾಬೇಸ್ನಿಂದ ಅಧಿಕೃತ ಹೆಸರನ್ನ ಪಡೆದು ಪ್ರದರ್ಶಿಸಲಾಗುತ್ತದೆ. ನಿಮ್ಮ ಫೋನ್ನಲ್ಲಿ ಆ ನಂಬರ್ ಮೊದಲೇ ಸೇವ್ ಆಗಿದ್ದರೆ ನೀವು ಸೇವ್ ಮಾಡಿದ ಹೆಸರೇ ಕಾಣಿಸುತ್ತದೆ, ಇಲ್ಲದಿದ್ದರೆ ಸಿಮ್ ನೋಂದಾಯಿತ ಅಸಲಿ ಹೆಸರು ಕಾಣಿಸುತ್ತದೆ.
ಥರ್ಡ್-ಪಾರ್ಟಿ ಆ್ಯಪ್ಗಳ ಅಗತ್ಯವಿಲ್ಲ
ಪ್ರಸ್ತುತ ಬಹುತೇಕ ಸ್ಮಾರ್ಟ್ಫೋನ್ ಬಳಕೆದಾರರು ಅಪರಿಚಿತ ಕರೆಗಳನ್ನ ಗುರುತಿಸಲು ಥರ್ಡ್-ಪಾರ್ಟಿ ಆ್ಯಪ್ಗಳನ್ನ ಅವಲಂಬಿಸಿದ್ದಾರೆ. ಆದರೆ, ಇಂತಹ ಆ್ಯಪ್ಗಳಲ್ಲಿ ಹೆಸರುಗಳು ನೂರಾರು ಬಳಕೆದಾರರ ಕ್ರೌಡ್-ಸೋರ್ಸಿಂಗ್ ಡೇಟಾದಿಂದ ಬರುವುದರಿಂದ ಅವು ಯಾವಾಗಲೂ ನಿಖರವಾಗಿರುವುದಿಲ್ಲ. ಸ್ಪ್ಯಾಮ್ ಮಾಡುವವರು ತಮ್ಮ ಹೆಸರನ್ನ ಬೇರೆ ರೀತಿಯಲ್ಲಿ ಸೇವ್ ಮಾಡುವ ಸಾಧ್ಯತೆಗಳೂ ಇರುತ್ತವೆ. ಆದರೆ ಸರ್ಕಾರದ ಈ ‘ಕಾಲರ್ ನೇಮ್ ಡಿಸ್ಪ್ಲೇ’ ವ್ಯವಸ್ಥೆಯು ಟೆಲಿಕಾಂ ಕಂಪನಿಗಳ ಅಧಿಕೃತ ಕೆವೈಸಿ ದಾಖಲೆಗಳನ್ನ ಅವಲಂಬಿಸಿರುವುದರಿಂದ, ಮಾಹಿತಿಯು ಸಂಪೂರ್ಣ ನಿಖರವಾಗಿರುತ್ತದೆ.
ಜೊತೆಗೆ, ಇದಕ್ಕಾಗಿ ಗ್ರಾಹಕರು ಯಾವುದೇ ಪ್ರತ್ಯೇಕ ಆ್ಯಪ್ ಡೌನ್ಲೋಡ್ ಮಾಡುವ, ಲಾಗಿನ್ ಆಗುವ ಅಥವಾ ಚಂದಾದಾರಿಕೆ ಪಡೆಯುವ ಅಗತ್ಯವಿರುವುದಿಲ್ಲ. ಇದು ಡೀಫಾಲ್ಟ್ ಆಗಿ ಪ್ರತಿಯೊಬ್ಬರ ಮೊಬೈಲ್ನಲ್ಲೂ ಕಾರ್ಯನಿರ್ವಹಿಸಲಿದೆ. ಅಂತರಾಷ್ಟ್ರೀಯ ಮತ್ತು ವಾಣಿಜ್ಯ ಕರೆಗಳಿಗೆ ಪ್ರತ್ಯೇಕ ವ್ಯವಸ್ಥೆ ದೇಶೀಯ ಕರೆಗಳಿಗೆ ಕರೆ ಮಾಡಿದವರ ಹೆಸರು ಕಾಣಿಸಿಕೊಂಡರೆ, ಅಂತರಾಷ್ಟ್ರೀಯ ಕರೆಗಳ ವಿಷಯದಲ್ಲಿ ನಿಯಮ ಕೊಂಚ ಭಿನ್ನವಾಗಿದೆ. ಅಂತರಾಷ್ಟ್ರೀಯ ಕರೆಗಳಿಗೆ ಅಧಿಕೃತ ಹೆಸರು ಲಭ್ಯವಿಲ್ಲದ ಕಾರಣ, ಮೊಬೈಲ್ ಪರದೆಯ ಮೇಲೆ ಕೇವಲ ಇಂಟರ್ನ್ಯಾಷನಲ್ ಕಾಲ್ ಎಂದು ಮಾತ್ರ ಪ್ರದರ್ಶಿಸಲಾಗುತ್ತದೆ. ಇನ್ನು, ವ್ಯಾಪಾರ-ವಹಿವಾಟು ನಡೆಸುವವರು ಹಾಗೂ ವಾಣಿಜ್ಯ ಸಂಪರ್ಕಗಳನ್ನ ಹೊಂದಿರುವವರು ತಮ್ಮ ವೈಯಕ್ತಿಕ ಹೆಸರಿನ ಬದಲಾಗಿ, ತಮ್ಮ ಬ್ರ್ಯಾಂಡ್ ಹೆಸರನ್ನ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಟ್ರೇಡ್ಮಾರ್ಕ್ ಅಥವಾ ಜಿಎಸ್ಟಿ ಪೋರ್ಟಲ್ನಲ್ಲಿ ನೋಂದಾಯಿಸಲಾದ ವ್ಯಾಪಾರದ ಅಧಿಕೃತ ಹೆಸರನ್ನ ಟೆಲಿಕಾಂ ಆಪರೇಟರ್ಗಳಿಗೆ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು. ವಂಚಕ ಕರೆಗಳ ನಿಯಂತ್ರಣಕ್ಕೆ ಪ್ರಬಲ ಅಸ್ತ್ರ ಬ್ಯಾಂಕ್ ಅಧಿಕಾರಿಗಳು, ವಿಮಾ ಏಜೆಂಟರು, ಕಸ್ಟಮರ್ ಕೇರ್ ಅಥವಾ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಒಟಿಪಿ ಪಡೆದು ಸಾರ್ವಜನಿಕರಿಗೆ ವಂಚಿಸುವ ಪ್ರಕರಣಗಳು ಇತ್ತೀಚೆಗೆ ಮಿತಿಮೀರಿವೆ. ಸಿಎನ್ಎಪಿ ವ್ಯವಸ್ಥೆಯು ಈ ರೀತಿಯ ವಂಚಕರ ಕರೆಗಳ ನಿಯಂತ್ರಣಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಲಿದೆ.
