ಪ್ರೆಸಿಡೆನ್ಸಿ ಪದವಿ ಪೂರ್ವ (ಪಿಯು) ಕಾಲೇಜು ಆಡಳಿತ ಮಂಡಳಿಯು ದಸರಾ ಹಬ್ಬದ ರಜೆಯನ್ನು ದಿಢೀರನೆ ರದ್ದುಗೊಳಿಸಿದೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಮಂಗಳವಾರ (ಅಕ್ಟೋಬರ್ 13) ಕಾಲೇಜಿನ ಹೆಬ್ಬಾಳ ಹಾಗೂ ಯಲಹಂಕ ಕ್ಯಾಂಪಸ್ಗಳ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.

ಕಾಲೇಜು ಆಡಳಿತ ಮಂಡಳಿಯ ಈ ನಿರ್ಧಾರದಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಜಮಾಯಿಸಿ, ತರಗತಿಗಳನ್ನು ಬಹಿಷ್ಕರಿಸಿ ಧರಣಿ ಕುಳಿತರು. ನಮಗೆ ದಸರಾ ರಜೆ ನೀಡಬೇಕು ಹಾಗೂ ರಾಜ್ಯ ಪಿಯು ಇಲಾಖೆಯ ಅಧಿಕೃತ ವೇಳಾಪಟ್ಟಿಯನ್ನು ಪಾಲಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ವಿದ್ಯಾರ್ಥಿಗಳ ಆರೋಪ ಏನು?
‘ಕಾಲೇಜು ಆಡಳಿತ ಮಂಡಳಿಯು ಆರಂಭದಲ್ಲಿ ಅಕ್ಟೋಬರ್ 10 ರಿಂದ 21ರ ವರೆಗೆ ದಸರಾ ರಜೆ ನೀಡುವುದಾಗಿ ಅಧಿಕೃತವಾಗಿ ಘೋಷಿಸಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಯಾವುದೇ ಮುನ್ಸೂಚನೆ ನೀಡದೇ ದಿಢೀರ್ ಈ ನಿರ್ಧಾರವನ್ನು ಹಿಂಪಡೆದಿದೆ,’ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ‘ನಮ್ಮ ಕಾಲೇಜು ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಮಂಡಳಿಯ ವ್ಯಾಪ್ತಿಗೆ ಒಳಪಡುತ್ತದೆ. ಪಿಯು ಇಲಾಖೆಯು ನಿಗದಿಪಡಿಸಿರುವ ಶೈಕ್ಷಣಿಕ ವೇಳಾಪಟ್ಟಿಯನ್ನು ಅನುಸರಿಸುವುದು ಪ್ರತಿಯೊಂದು ಕಾಲೇಜಿನ ಕರ್ತವ್ಯ. ಅದನ್ನು ಬಿಟ್ಟು ಆಡಳಿತ ಮಂಡಳಿಯು ತಾನೇ ಸ್ವತಃ ನಿರ್ಧಾರ ತೆಗೆದುಕೊಂಡು ರಜೆಯನ್ನು ರದ್ದುಗೊಳಿಸಿರುವುದು ನಿಯಮಬಾಹಿರ,’ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು ಅಂತಾ ವರದಿಯಾಗಿದೆ. ದಸರಾ ಹಬ್ಬವು ಕರ್ನಾಟಕದ ನಾಡಹಬ್ಬವಾಗಿದ್ದು, ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವಂತ ಊರುಗಳಿಗೆ ತೆರಳಿ ಕುಟುಂಬದೊಂದಿಗೆ ಹಬ್ಬ ಆಚರಿಸಲು ಯೋಜಿಸಿದ್ದರು. ಆದರೆ ಕಾಲೇಜಿನ ಈ ನಿರ್ಧಾರದಿಂದಾಗಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾದಂತಾಗಿದೆ ಎನ್ನುವ ಆಕ್ರೋಶಗಳು ವ್ಯಕ್ತವಾಗಿವೆ. ‘ರಜೆ ರದ್ದುಗೊಳಿಸಲು ಕಾರಣವೇನು ಎಂಬುದಕ್ಕೆ ಆಡಳಿತ ಮಂಡಳಿಯು ನಮಗೆ ಯಾವುದೇ ರೀತಿಯ ಸ್ಪಷ್ಟನೆ ಅಥವಾ ವಿವರಣೆಯನ್ನು ನೀಡಿಲ್ಲ,’ ಎಂದು ಮತ್ತೊಬ್ಬ ವಿದ್ಯಾರ್ಥಿ ಬೇಸರ ವ್ಯಕ್ತಪಡಿಸಿದರು.
